ದಿಸ್ಪುರ್, ನ. 25 (DaijiworldNews/AA): ಗಾಯಕ ಜುಬೀನ್ ಗಾರ್ಗ್ ಸಾವು ಆಕಸ್ಮಿಕವಲ್ಲ, ಇದೊಂದು ಯೋಜಿತ ಕೊಲೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡುವಾಗ ಈ ಕುರಿತು ಮಾಹಿತಿ ನೀಡಿದ ಅವರು, "ಪ್ರಾಥಮಿಕ ತನಿಖೆಯಲ್ಲಿ, ಇದೊಂದು ಅಪಘಾತವಲ್ಲ. ಯೋಜಿತ ಕೊಲೆ ಎಂದು ಅಸ್ಸಾಂ ಪೊಲೀಸರಿಗೆ ಖಚಿತವಾಗಿದೆ. ಅದಕ್ಕಾಗಿಯೇ ಅವರ ಸಾವನ್ನಪ್ಪಿದ ಮೂರು ದಿನಗಳಲ್ಲಿ ಬಿಎನ್ಎಸ್ನ ಸೆಕ್ಷನ್ 103ನ್ನು ಪ್ರಕರಣಕ್ಕೆ ಸೇರಿಸಲಾಗಿತ್ತು. ಆರೋಪಿಗಳ ಪೈಕಿ ಓರ್ವ ಕೊಲೆ ಮಾಡಿದ್ದು, ಇನ್ನುಳಿದವರು ಆತನಿಗೆ ಸಹಾಯ ಮಾಡಿದ್ದಾರೆ. ಸದ್ಯ ಕೊಲೆ ಸಂಬಂಧ ನಾಲ್ಕರಿಂದ ಐದು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ" ಎಂದು ಹೇಳಿದರು.
"ಪ್ರಕರಣವು ಕೊಲೆಗೆ ಸಂಬಂಧಿಸಿದೆ ಎಂದು ಪೊಲೀಸರು ಮೊದಲೇ ತೀರ್ಮಾನಿಸಿದ್ದರು. ಇದು ಸೆಕ್ಷನ್ ನ್ನು ತ್ವರಿತವಾಗಿ ಸೇರಿಸಲು ಕಾರಣವಾಯಿತು. ಸಿಐಡಿ ಅಡಿಯಲ್ಲಿರುವ ಎಸ್ಐಟಿ ಇದುವರೆಗೆ 7 ಜನರನ್ನು ಬಂಧಿಸಿದೆ. 252 ಸಾಕ್ಷಿಗಳನ್ನು ಪರಿಶೀಲಿಸಿದೆ ಮತ್ತು 29 ವಸ್ತುಗಳನ್ನು ವಶಪಡಿಸಿಕೊಂಡಿದೆ" ಎಂದು ಮಾಹಿತಿ ನೀಡಿದರು.
"ಡಿಸೆಂಬರ್ನಲ್ಲಿ ಆರೋಪಪಟ್ಟಿ ಸಲ್ಲಿಸಲಾಗುವುದು, ನಂತರ ನಿರ್ಲಕ್ಷ್ಯ, ಕ್ರಿಮಿನಲ್ ನಂಬಿಕೆ ದ್ರೋಹ ಮತ್ತು ಇತರ ಅಂಶಗಳನ್ನು ಒಳಗೊಳ್ಳಲು ತನಿಖೆಯನ್ನು ವಿಸ್ತರಿಸಲಾಗುವುದು" ಎಂದರು.