ಬೆಂಗಳೂರು, ,ನ. 15 (DaijiworldNews/AK): ಸಕಲ ಸರ್ಕಾರಿ ಗೌರವದೊಂದಿಗೆ ಸಾಲುಮರದ ತಿಮ್ಮಕ್ಕ ಅವರ ಅಂತ್ಯಕ್ರಿಯೆ ನಗರದ ಜ್ಞಾನಭಾರತಿಯ ಕಲಾಗ್ರಾಮದಲ್ಲಿ ನೆರವೇರಿತು.

ಆ ಮೂಲಕ ವೃಕ್ಷಮಾತೆ ಮಣ್ಣಲ್ಲಿ ಮಣ್ಣಾದರು. ಸಾಹಿತಿ ಡಾ.ಸಿದ್ದಲಿಂಗಯ್ಯನವರ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ಮಾಡಲಾಗಿದೆ. ಪೊಲೀಸರು 3 ಸುತ್ತು ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಿದರು. ತಿಮ್ಮಕ್ಕನವರ ಪುತ್ರ ಉಮೇಶ್ಗೆ ಗೃಹಸಚಿವ ಡಾ.ಪರಮೇಶ್ವರ್ ತ್ರಿವರ್ಣ ಧ್ವಜ ಹಸ್ತಾಂತರ ಮಾಡಿದರು.
ಅನಕ್ಷರಸ್ಥೆಯಾಗಿದ್ದ ತಿಮ್ಮಕ್ಕನವರು ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ಅಪ್ರತಿಮ ಪರಿಸರವಾದಿ. ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದ್ದರ ಹಿನ್ನೆಲೆ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳೂ ಅವರು ಭಾಜನರಾಗಿದ್ದರು.