ನವದೆಹಲಿ, ನ. 15 (DaijiworldNews/AA): ಉಗ್ರ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದಲ್ಲಿ ಬಂಧಿಸಲಾಗಿರುವ ಲಕ್ನೋ ಮೂಲದ ವೈದ್ಯೆ ಶಾಹಿನ ಸಯೀದ್ ವಿದೇಶಕ್ಕೆ ಪರಾರಿಯಾಗಲು ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಿದ್ದಳು. ಆಕೆಯ ಪಾಸ್ಪೋರ್ಟ್ಗಾಗಿ ಪೊಲೀಸರು ಪರಿಶೀಲನೆಯನ್ನೂ ನಡೆಸಿದ್ದರು ಎಂದು ತಿಳಿದುಬಂದಿದೆ.

ಲಕ್ನೋದ ಲಾಲ್ ಬಾಗ್ ನಿವಾಸಿಯಾಗಿರುವ ಶಾಹಿನ ಫರಿದಾಬಾದ್ನ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಹಿರಿಯ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಳು. ಈಕೆಯ ಕಾರಿನಲ್ಲಿ ಅಸಾಲ್ಟ್ ರೈಫಲ್ಗಳು ಮತ್ತು ಇತರ ಮದ್ದುಗುಂಡುಗಳು ಪತ್ತೆಯಾಗಿದ್ದವು. ಇದರ ಬೆನ್ನಲ್ಲೇ ಆಕೆಯನ್ನು ಬಂಧಿಸಲಾಗಿತ್ತು.
ಬಂಧಿತ ಶಾಹಿನ ಭಾರತದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ (ಜೆಇಎಂ)ನ ಮಹಿಳಾ ವಿಭಾಗವನ್ನು ಸ್ಥಾಪಿಸುವ ಕೆಲಸವನ್ನು ವಹಿಸಿಕೊಂಡಿದ್ದಳು ಎಂದು ದೆಹಲಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ನ. 10 ರಂದು ಕೆಂಪು ಕೋಟೆಯ ಬಳಿ ಐ20 ಕಾರು ಸ್ಫೋಟ ಪ್ರಕರಣದಲ್ಲಿ ಶಾಹಿನ ಕೈವಾಡದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಪಾಕಿಸ್ತಾನದಲ್ಲಿರುವ ಜೆಇಎಂ ಸಂಸ್ಥಾಪಕ ಮಸೂದ್ ಅಜರ್ ಅವರ ಸಹೋದರಿ ಸಾದಿಯಾ ಅಜರ್ ನೇತೃತ್ವದ ಜೆಎಂನ ಮಹಿಳಾ ವಿಭಾಗ ಜಮಾತ್ ಉಲ್-ಮೊಮಿನಾತ್ನ ಭಾರತ ಶಾಖೆಯ ಜವಾಬ್ದಾರಿಯನ್ನು ಶಾಹಿನಗೆ ವಹಿಸಲಾಗಿತ್ತು. ಈಕೆ ಜೈಶ್ ಮಹಿಳಾ ವಿಂಗ್ನ ಭಾರತದ ನಾಯಕಿ ಎಂದು ಹೇಳಲಾಗಿದೆ.