ಬೆಳಗಾವಿ, ನ. 15 (DaijiworldNews/AA): ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದಲ್ಲಿರುವ ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೇವಲ ಎರಡು ದಿನಗಳ ಅವಧಿಯಲ್ಲಿ ಒಟ್ಟು 28 ಕೃಷ್ಣ ಮೃಗಗಳು ಏಕಾಏಕಿ ಮೃತಪಟ್ಟಿದ್ದು, ಮಾರಣಾಂತಿಕ ವೈರಸ್ಗೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ.

ನವೆಂಬರ್ 13 ರಂದು ಮೃಗಾಲಯದಲ್ಲಿ 8 ಕೃಷ್ಣ ಮೃಗಗಳ ಸಾವನ್ನಪ್ಪಿದ್ದವು. ಆದರೆ, ಇಂದು ಒಂದೇ ದಿನ 20 ಕೃಷ್ಣ ಮೃಗಗಳು ಮತ್ತೆ ಮೃತಪಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ. ನ. 13 ರಂದು ಸಾವನ್ನಪ್ಪಿದ್ದ ಕೃಷ್ಣಮೃಗಳ ಮರಣೋತ್ತರ ಪರೀಕ್ಷೆ ನಡೆಸಿ, ಸ್ಯಾಂಪಲ್ ಸಂಗ್ರಹಿಸಿ ಮೈಸೂರಿನ ಲ್ಯಾಬ್ಗೆ ರವಾನೆ ಮಾಡಲಾಗಿದೆ. ಲ್ಯಾಬ್ನಿಂದ ವರದಿ ಬರುವ ಮುನ್ನವೆ ಇಂದು ಮತ್ತೆ 20 ಕೃಷ್ಣಮೃಗಗಳು ಸಾವನ್ನಪ್ಪಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕೃಷ್ಣ ಮೃಗಗಳು ಬ್ಯಾಕ್ಟೀರಿಯಾ ಸೋಂಕಿನಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಮೃಗಾಲಯದಲ್ಲಿ ಒಟ್ಟು 38 ಕೃಷ್ಣಮೃಗಳಿದ್ದು ಆ ಪೈಕಿ 28 ಸಾವನ್ನಪ್ಪಿವೆ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.