ಶ್ರೀನಗರ, ನ. 15 (DaijiworldNews/AA): ಶ್ರೀನಗರದ ನೌಗಮ್ ಪೊಲೀಸ್ ಠಾಣೆಯಲ್ಲಿ ಸಂಭವಿಸಿದ್ದ ಸ್ಫೋಟವು ಕೇವಲ ಆಕಸ್ಮಿಕ ಘಟನೆ. ಸಂಗ್ರಹಿಸಿದ್ದ ಸ್ಫೋಟಕದಿಂದ ಮಾದರಿಯನ್ನ ಹೊರ ತೆಗೆಯುವಾಗ ಸ್ಫೋಟ ಸಂಭವಿಸಿದೆ. ಇದರ ಹಿಂದೆ ಯಾವುದೇ ಭಯೋತ್ಪಾದನೆ ಪಿತೂರಿ ಇಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಹಾಗೂ ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ನಳಿನ್ ಪ್ರಭಾತ್ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಜಿಪಿ ನಳಿನ್ ಪ್ರಭಾತ್, "ಪೊಲೀಸ್ ಠಾಣೆಯಲ್ಲಿ ನಡೆದ ಸ್ಫೋಟವು ಯಾವುದೇ ಭಯೋತ್ಪಾದಕರ ಸಂಚು ಅಥವಾ ದಾಳಿಯಲ್ಲ. ವಿಧಿವಿಜ್ಞಾನ ಪ್ರಯೋಗಾಲಯ ತಂಡವು ಮಾದರಿಗಳನ್ನು ಸಂಗ್ರಹಿಸುತ್ತಿದ್ದಾಗ ಸಂಭವಿಸಿದ ಅಪಘಾತ. ಘಟನೆಯಲ್ಲಿ 6 ಪೊಲೀಸರು ಸೇರಿ 9 ಮಂದಿ ಮೃತಪಟ್ಟಿದ್ದಾರೆ, 27 ಮಂದಿ ಗಂಭೀರ ಗಾಯಗೊಂಡಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.
"ಫರಿದಾಬಾದ್ನಿಂದ ವಶಪಡಿಸಿಕೊಂಡ ಸ್ಫೋಟಕಗಳ ಮಾದರಿ ಪರೀಕ್ಷೆಯು ಕಳೆದ 2 ದಿನಗಳಿಂದ ನಡೆಯುತ್ತಿದೆ. ಇದರ ಭಾಗವಾಗಿಯೇ ರಾತ್ರಿ 11:20ರ ಸುಮಾರಿಗೆ ಪರೀಕ್ಷೆಗಾಗಿ ಮಾದರಿ ಸಂಗ್ರಹಿಸುವಾಗ ಘಟನೆ ಸಂಭವಿಸಿದೆ. ಇದು ದುರಾದೃಷ್ಟಕರ, ಒಟ್ಟಿನಲ್ಲಿ ಘಟನೆ ಸಂಬಂಧಿಸಿದಂತೆ ಪೂರ್ಣ ತನಿಖೆ ನಡೆಯುತ್ತಿದೆ. ಇನ್ನೂ ಘಟನಾ ಸ್ಥಳದಿಂದ 6 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಅವು ಗುರುತಿಸಲಾಗದ ಸ್ಥಿತಿಯಲ್ಲಿದೆ. ಮೃತದೇಹಗಳನ್ನು ಶ್ರೀನಗರದಲ್ಲಿರುವ ಪೊಲೀಸ್ ಕಂಟ್ರಲ್ ರೂಮ್ಗೆ ಸಾಗಿಸಲಾಗಿದೆ" ಎಂದು ಹೇಳದರು.
ಇನ್ನೂ ನೌಗಮ್ ಠಾಣೆಯಲ್ಲಿ ಉಂಟಾದ ಸ್ಫೋಟದ ಕುರಿತು ಗೃಹ ಸಚಿವಾಲಯ ಕೂಡ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಆಕಸ್ಮಿಕ ಘಟನೆ ಎಂದು ತಿಳಿಸಿದೆ.