ಕಾರವಾರ, ನ. 13 (DaijiworldNews/AK): ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಕಬ್ಬಿಣದ ಅದಿರು ಸಾಗಾಟ ಮತ್ತು ಮಾರಾಟಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್ ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ.

ಶಾಸಕರಿಗೆ ನೀಡಲಾಗಿದ್ದ ಮಧ್ಯಂತರ ವೈದ್ಯಕೀಯ ಜಾಮೀನು ಅವಧಿಯನ್ನು ನ್ಯಾಯಾಲಯವು ನವೆಂಬರ್ 20ರ ವರೆಗೆ ವಿಸ್ತರಿಸಿ ಆದೇಶ ನೀಡಿದೆ. ನ್ಯಾಯಮೂರ್ತಿಗಳು ಈ ಕುರಿತು ಆದೇಶ ಹೊರಡಿಸಿದ್ದು, ಶಾಸಕರ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಲು ಅರ್ಹ ವೈದ್ಯರ ಹೆಸರನ್ನು ಸೂಚಿಸುವಂತೆ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ನಿರ್ದೇಶನ ನೀಡಿದ್ದಾರೆ. ಶಾಸಕ ಸತೀಶ್ ಸೈಲ್ ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.
ವಿಶೇಷ ನ್ಯಾಯಾಲಯವು ಇತ್ತೀಚೆಗೆ, ಸತೀಶ್ ಸೈಲ್ ಅವರು ತನಿಖೆಗೆ ಸಹಕರಿಸುತ್ತಿಲ್ಲ ಮತ್ತು ಸೂಚಿಸಲಾದ ವೈದ್ಯಕೀಯ ಚಿಕಿತ್ಸೆಗೆ ಬದ್ಧರಾಗಿಲ್ಲ ಎಂಬ ಕಾರಣ ನೀಡಿ ಅವರ ವೈದ್ಯಕೀಯ ಜಾಮೀನನ್ನು ರದ್ದುಗೊಳಿಸಿ, ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು.
ವಿಶೇಷ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಸೈಲ್ ಅವರು ಹೈಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು ನವೆಂಬರ್ 13ಕ್ಕೆ ಮುಂದೂಡಿದ್ದು, ಅಲ್ಲಿಯವರೆಗೆ ಮಧ್ಯಂತರ ಜಾಮೀನು ಮುಂದುವರೆಸಿತ್ತು. ಇದೀಗ ಮತ್ತೆ ಒಂದು ವಾರಗಳ ಕಾಲ ಜಾಮೀನು ವಿಸ್ತರಣೆ ಮಾಡಿ ಆದೇಶಿಸಿದೆ.