ಬೆಂಗಳೂರು,ನ. 13 (DaijiworldNews/AK): ರಾಜ್ಯ ಸರಕಾರದ ಬಳಿ ಬೆಂಗಳೂರಿನ ಗುಂಡಿಗಳನ್ನು ಮುಚ್ಚಲು ಹಣ ಇಲ್ಲದಿದ್ದರೂ ಎರಡು ಸುರಂಗ ರಸ್ತೆ ಮಾಡುವುದಾಗಿ ಭಂಡತನದಿಂದ ಮುಂದೆ ಹೋಗುತ್ತಿದೆ. ಇದು ದುರದೃಷ್ಟದ ವಿಚಾರ ಎಂದು ಸಂಸದ ಪಿ.ಸಿ. ಮೋಹನ್ ಅವರು ಆಕ್ಷೇಪಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಈ ಸಂಬಂಧ ಟೆಂಡರ್ ಕರೆದು ತಾಂತ್ರಿಕ ಬಿಡ್ ತೆರೆದಿದ್ದಾರೆ. ಎಸ್ಟೀಮ್ ಮಾಲ್ನಿಂದ ಮಡಿವಾಳದ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ವರೆಗೆ 18 ಕಿಮೀನ ಒಂದು ಟನೆಲ್ ರಸ್ತೆ ಮಾಡುತ್ತಿದ್ದಾರೆ. ಒಳಕ್ಕೆ ಹೋಗುವ (ಎಂಟ್ರಿ) ಮತ್ತು ಹೊರಬರುವ (ಎಕ್ಸಿಟ್) ಪಾಯಿಂಟ್ 15 ಕಿಮೀ ಇದ್ದು, ಒಟ್ಟು 33 ಕಿಮೀನ ಟನೆಲ್ ರಸ್ತೆ ಇದಾಗಿದೆ. ಭೂಮಿಯಲ್ಲಿ 30ರಿಂದ 40 ಮೀಟರ್ ಅಂದರೆ, 130ರಿಂದ 140 ಅಡಿ ಕೆಳಗೆ ಇರುವಂಥ ಸುರಂಗ ಮಾರ್ಗ ಇದಾಗಿದೆ ಎಂದರು.
ಹೆಬ್ಬಾಳದಿಂದ ಬಂದು ಮೇಖ್ರಿ ವೃತ್ತದಲ್ಲಿ ಒಂದು ಎಕ್ಸಿಟ್, ರೇಸ್ಕೋರ್ಸ್, ಲಾಲ್ಬಾಗ್ ಒಂದೊಂದು ಎಕ್ಸಿಟ್, ಅದಾದ ಬಳಿಕ ಕೊನೆಯಲ್ಲಿ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ಒಂದು ಎಕ್ಸಿಟ್ ಇರುತ್ತದೆ. ಸಂಚಾರದ ದಟ್ಟಣೆ ಅಧ್ಯಯನ ನಡೆದಿಲ್ಲ; ಖಾಲಿ ಜಾಗ ಇದ್ದಲ್ಲಿ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್ ನೀಡಿದ್ದಾಗಿ ಟೀಕಿಸಿದರು. ವೈಜ್ಞಾನಿಕ ಅಧ್ಯಯನ ಇಲ್ಲದೇ ಸಮರ್ಪಕ ಚಿಂತನೆ ಒಳಗೊಳ್ಳದೇ ಇದನ್ನು ಮಾಡುತ್ತಿದ್ದಾರೆ ಎಂದು ದೂರಿದರು.
ಕಳೆದ ಒಂದೂವರೆ ವರ್ಷದಿಂದ ರಾಜ್ಯ ಸರಕಾರವು ಬೆಂಗಳೂರಿನಲ್ಲಿ ಎರಡು ಟನೆಲ್ ಯೋಜನೆ ಜಾರಿ ಮಾಡಲು ಪ್ರಸ್ತಾವನೆ ಸಲ್ಲಿಸಿದೆ. ಈ ಯೋಜನೆಯನ್ನು ಬೆಂಗಳೂರಿಗೆ ತರಲು ಉಪ ಮುಖ್ಯಮಂತ್ರಿ ಮತ್ತು ನಗರ ಉಸ್ತುವಾರಿ ಸಚಿವರು ಕಾತರದಿಂದ ಇದ್ದಾರೆ ಎಂದು ನುಡಿದರು.
2024ರ ಜುಲೈನಲ್ಲೇ ನಾನು ಇದರ ಸಾಧಕ- ಬಾಧಕ, ಡಿಪಿಆರ್ನಲ್ಲಿನ ನ್ಯೂನತೆಗಳ ಕುರಿತು ಸರಕಾರದ ಗಮನಕ್ಕೆ ತಂದಿದ್ದೆ. 14 ಕೋಟಿ ಖರ್ಚಿನಲ್ಲಿ ಬ್ಲ್ಯಾಕ್ ಲಿಸ್ಟ್ ಆದ ಕಂಪೆನಿ ಆಲ್ಟಿನಾಕ್ ಕನ್ಸಲ್ಟೆಂಟ್ ಮತ್ತು ರಾಡಿಕ್ ಕನ್ಸಲ್ಟೆಂಟ್ ಸಂಸ್ಥೆಗೆ ಡಿಪಿಆರ್ ಮತ್ತು ಸಾಧ್ಯಾಸಾಧ್ಯತಾ ವರದಿ ನೀಡಲು ಸೂಚಿಸಿದ್ದಾಗಲೇ ಇದನ್ನು ನಾನು ವಿರೋಧಿಸಿದ್ದೆ ಎಂದು ತಿಳಿಸಿದರು.
ಇಂಥ ಪ್ರಮುಖ ಟನೆಲ್ ಯೋಜನೆಯ ಡಿಪಿಆರ್ಗೆ ಕನಿಷ್ಠ ಒಂದೂವರೆಯಿಂದ 2 ವರ್ಷ ಬೇಕು ಎಂದರು.
ಅರ್ಹರಿಂದ ತಾಂತ್ರಿಕ ಅಧ್ಯಯನ ನಡೆಸಬೇಕಿತ್ತು
ತಾಂತ್ರಿಕ ಅಧ್ಯಯನ ನಡೆಸಲು ಸಮಿತಿ ರಚಿಸಿಲ್ಲ; ಸರಕಾರವು ಅವರದೇ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ (ಎಂಡಿ), ಚೀಫ್ ಎಂಜಿನಿಯರ್, ದೆಹಲಿಯ ಒಂದು ಖಾಸಗಿ ಕನ್ಸಲ್ಟೆಂಟ್ ಬಳಿ ವರದಿ ಪಡೆದಿದ್ದಾರೆ. ಇವರು ಮೂವರೂ ಡಿ.ಕೆ.ಶಿವಕುಮಾರ್ ಅವರು ಹೇಳಿದ ತಾಳಕ್ಕೇ ಕುಣಿಯುತ್ತಾರೆಯೇ ಹೊರತು, ಅವರು ನೈಜ ಸಮಸ್ಯೆಯನ್ನು ಹೇಳಲು ಹೋಗುವುದಿಲ್ಲ ಎಂದು ಹೇಳಿದರು.