ಬೆಂಗಳೂರು, ನ. 13 (DaijiworldNews/AA): ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡರು ಮತ್ತವರ ತಂಡ ಬೆಂಗಳೂರು ಮಹಾ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ. ವಂ. ಡಾ. ಪೀಟರ್ ಮಚಾದೊ ರವರನ್ನು ಭೇಟಿಯಾಗಿ, ಚರ್ಚುಗಳ ಪ್ರಾರ್ಥನಾ ವಿಧಿಗಳಲ್ಲಿ ಕನ್ನಡ ಬಳಸುವಂತೆ ಒತ್ತಾಯಪೂರ್ವಕ ಮನವಿ ಮಾಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ಕಥೊಲಿಕ ಥಿಂಕ್ ಟ್ಯಾಂಕ್ ಸಮಿತಿಯ ಅಧ್ಯಕ್ಷರು, ಮಂಗಳೂರು ಕಥೊಲಿಕ ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ರೊಯ್ ಕ್ಯಾಸ್ತೆಲಿನೊ ಅವರು, 'ನಮ್ಮ ಪ್ರಾರ್ಥನಾ ವಿಧಿಯ ಭಾಷೆ ಬಗ್ಗೆ ಹಸ್ತಕ್ಷೇಪ ಸಲ್ಲದು' ಎಂದು ತಿಳಿಸಿದ್ದಾರೆ.

"ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಇದರಲ್ಲಿ ಎರಡು ಮಾತಿಲ್ಲ. ಆದರೆ ಕನ್ನಡದ ಸೋದರ ಭಾಷೆಗಳಾದ ಕೊಂಕಣಿ, ತುಳು, ಕೊಡವ, ಬ್ಯಾರಿ, ಲಂಬಾಣಿ ಮತ್ತಿತರ ಭಾಷೆಗಳನ್ನು ಮಾತೃಭಾಷೆಯನ್ನಾಗಿ ಹೊಂದಿರುವ ಲಕ್ಷಾಂತರ ಜನ ಕರ್ನಾಟಕದಲ್ಲಿ ವಾಸಿಸುತ್ತಿದ್ದಾರೆ. ಕನ್ನಡವನ್ನು ಗೌರವಿಸುತ್ತಲೇ ಅವರವರ ಮಾತೃಭಾಷೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಆಯಾ ಭಾಷಿಕ ಸಮುದಾಯದ್ದು. ಇದಕ್ಕೆ ದೇಶದ ಸಂವಿಧಾನವೇ ಅವಕಾಶ ನೀಡಿದೆ. ನಮ್ಮ ಸರ್ಕಾರಗಳೂ ವಿವಿಧ ರೀತಿಯ ಸಹಕಾರ ನೀಡುತ್ತಾ ಬಂದಿವೆ" ಎಂದು ಹೇಳಿದರು.
"ಭಾಷೆಯ ಉಳಿವಿನಲ್ಲಿ ಧರ್ಮ ಮಹತ್ತರ ಪಾತ್ರ ವಹಿಸಿದೆ. ಕರ್ನಾಟಕದಲ್ಲಿ ಕ್ರೈಸ್ತ ಧರ್ಮದಿಂದ ಕೊಂಕಣಿ ಭಾಷೆ ಉಳಿದಿದೆ, ಬೆಳೆದಿದೆ. ಸರ್ಕಾರ ಕೂಡಾ ಕೊಂಕಣಿ ಅಕಾಡೆಮಿ ನೀಡಿ ಕೊಂಕಣಿ ಭಾಷೆಗೆ ಪ್ರೋತ್ಸಾಹ ನೀಡುತ್ತಿದೆ. ಬೆಂಗಳೂರು ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲೂ ಕನ್ನಡದೊಡನೆ, ಇಂಗ್ಲೀಷ್, ತಮಿಳು, ಮಲಯಾಳಂ, ಕೊಂಕಣಿ ಭಾಷೆಗಳ ಪ್ರಾರ್ಥನಾ ವಿಧಿಗಳಿಗೆ ಅವಕಾಶವಿದೆ" ಎಂದರು.
"ಕೇವಲ ಕನ್ನಡದಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕು ಎಂಬ ಇಂದಿನ ಮನವಿ, ಮುಂದೆ ಹೇರಿಕೆಯಾಗುವ ಸಂಭವವಿದೆ. ಇದನ್ನು ನಾವು ಸ್ಪಷ್ಟವಾಗಿ ನಿರಾಕರಿಸುತ್ತೇವೆ. ಕನ್ನಡಕ್ಕಾಗಿ ನಾವೂ ಕೈ ಎತ್ತುತ್ತೇವೆ. ಆದರೆ ನಮ್ಮ ಪ್ರಾರ್ಥನಾ ವಿಧಿಗಳ ಭಾಷೆ ಯಾವುದಿರಬೇಕೆಂದು ನಿರ್ಧರಿಸುವವರು ನಾವೇ ವಿನಃ ಇತರರಲ್ಲ" ಎಂದು ತಿಳಿಸಿದರು.