ನವದೆಹಲಿ, ನ. 12 (DaijiworldNews/AA): ದೆಹಲಿಯ ಕೆಂಪು ಕೋಟೆಯಲ್ಲಿ ನ.10ರಂದು ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಸಂಸ್ಥೆಗಳು ತನಿಖೆ ಚುರಕುಗೊಳಿಸಿವೆ. ಮೃತಪಟ್ಟ 12 ಜನರಲ್ಲಿ 2 ಶವಗಳು ಉಗ್ರರದ್ದೇ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ದೆಹಲಿ ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡವರ ಪೈಕಿ ಈಗಾಗಲೇ 8 ಮೃತದೇಹಗಳ ಗುರುತು ಪತ್ತೆಯಾಗಿದೆ. ಇದರಲ್ಲಿ 2 ದೇಹಗಳ ಗುರುತು ಪತ್ತೆಹಚ್ಚುವುದು ಎಫ್ಎಸ್ಎಲ್ ತಂಡಕ್ಕೆ ಸವಾಲಾಗಿದೆ. ಒಂದು ಶವದ ತಲೆ ನಾಪತ್ತೆಯಾಗಿದ್ದು, 2 ದೇಹಗಳು ಛಿದ್ರ ಛಿದ್ರವಾಗಿದ್ದು ಹೊಟ್ಟೆ, ತುಂಡಾದ ಬೆರಳುಗಳು, ಕಾಲುಗಳು ಸ್ಥಳದಲ್ಲಿ ದೊರೆತಿವೆ. ಹೀಗಾಗಿ ಗುರುತು ಪತ್ತೆಹಚ್ಚುವುದು ಕಷ್ಟಕರವಾಗಿದೆ.
ಈವರೆಗೆ ಗುರುತು ಪತ್ತೆಯಾಗದ ಎರಡು ಮೃತದೇಹಗಳು ಉಗ್ರರದ್ದು ಅನ್ನೋ ಶಂಕೆ ವ್ಯಕ್ತವಾಗಿದೆ. ಇದರಲ್ಲಿ ಒಂದು ದೇಹ ಸ್ಫೋಟದ ರುವಾರಿ ಡಾ. ಉಮರ್ ಮೊಹಮ್ಮದ್ನದ್ದು ಇರಬಹುದು ಎಂದು ಸಂಶಯ ವ್ಯಕ್ತಪಡಿಸಲಾಗಿದೆ. ಅದಕ್ಕಾಗಿ ಈಗಾಗಲೇ ಡಾ. ಉಮರ್ ತಾಯಿಯ ಡಿಎನ್ಎ ಮಾದರಿಯನ್ನೂ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತಿದೆ. ಮತ್ತೊಂದು ಕಡೆ ತನಿಖಾ ಏಜೆನ್ಸಿಗಳು ಸ್ಥಳದಲ್ಲಿ ಪತ್ತೆಯಾದ ದೇಹದ ಅಂಗಾಂಗಗಳನ್ನ ಹೊಂದಿಸಿ ಗುರುತು ಪತ್ತೆಹಚ್ಚಲು ಪ್ರಯತ್ನಿಸುತ್ತಿವೆ.
ಶಂಕಿತ ಆರೋಪಿ ಉಮರ್ ನಬಿ ಶ್ರೀನಗರದಿಂದ ಎಂಬಿಬಿಎಸ್ ಮತ್ತು ಎಂಡಿ ಪದವಿಗಳನ್ನು ಪಡೆದು 2023ರಲ್ಲಿ ಕಾಶ್ಮೀರದ ಅನಂತ್ನಾಗ್ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಎಸ್ಆರ್ ಆಗಿ ಕೆಲಸ ಮಾಡುತ್ತಿದ್ದ. ಆರಂಭದಿಂದಲೂ ಉಮರ್ ಕೆಲಸ ವಿಷಯದಲ್ಲಿ ಕೆಟ್ಟ ಉದ್ಯೋಗಿಯಾಗಿಯೇ ಕಾಣಿಸಿಕೊಂಡಿದ್ದ. ಸಹ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ ಸೇರಿದಂತೆ ರೋಗಿಗಳಿಂದ ಆತನ ವಿರುದ್ಧ ದಿನೇದಿನೇ ಅಸಭ್ಯ ಹಾಗೂ ಅಜಾಗರೂಕತೆ ಬಗ್ಗೆ ಒಂದಿಲ್ಲೊಂದು ದೂರುಗಳು ಬರುತ್ತಲೇ ಇದ್ದವು. ಅಲ್ಲದೇ ಉಮರ್ ಕೂಡ ಹೆಚ್ಚಿನ ಸಮಯ ಆಸ್ಪತ್ರೆಗೆ ಗೈರಾಗಿಯೇ ಇರುತ್ತಿದ್ದ ಎಂದು ಆರೋಪಿಸಲಾಗಿದೆ.
ಸ್ಫೋಟ ಸಂಭವಿಸಿದ ಸಮಯದಲ್ಲಿ ಹುಂಡೈ ಐ20 ಕಾರಿನಲ್ಲಿ ಮೂವರು ಇದ್ದರು ಎಂದು ಹೇಳಲಾಗಿತ್ತು. ಅಲ್ಲದೇ ಡಾ. ಉಮರ್ ಮೊಹಮ್ಮದ್ ಕಾರಿನಲ್ಲಿ ಇದ್ದದ್ದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿತ್ತು.