ಬೆಂಗಳೂರು, ನ. 11 (DaijiworldNews/AA): ದೆಹಲಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಕೇಂದ್ರ ಸರ್ಕಾರ ಮತ್ತು ಅಲ್ಲಿನ ರಾಜ್ಯ ಸರ್ಕಾರದ ಇಂಟಲಿಜೆನ್ಸ್ ವೈಫಲ್ಯ ಆಗಿದೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಕೇಂದ್ರ ಮತ್ತು ದೆಹಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿ ಬಾಂಬ್ ಸ್ಫೋಟ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, "ಬಾಂಬ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ. ಅವರ ಕುಟುಂಬಗಳಿಗೆ ಅವರನ್ನ ಕಳೆದುಕೊಂಡ ಶಕ್ತಿ ದೇವರು ಕೊಡಲಿ. ದೆಹಲಿಯಲ್ಲಿ ಘಟನೆ ನೋಡಿದಾಗ, ರಾಜಧಾನಿಯ ಕೇಂದ್ರ ಬಿಂದು ಕೆಂಪು ಕೋಟೆ. ಬಹಳ ಜನರು ಇರೋ ಪ್ರದೇಶ ಇದು. ಇಂತಹ ಘಟನೆ ಇಲ್ಲಿ ಆಗಿರೋದು ನೋಡಿದ್ರೆ ಯಾರು ವಿಫಲರಾಗಿದ್ದಾರೆ ಅದನ್ನ ನೋಡಬೇಕು. ದೆಹಲಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ಬಿಜೆಪಿ ಇದೆ. ಕೇಂದ್ರ, ರಾಜ್ಯ ಸರ್ಕಾರ ಇಂಟಲಿಜೆನ್ಸ್ನಲ್ಲಿ ಫೇಲ್ ಆಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಪಹಲ್ಗಾಮ್ ಘಟನೆ ಆದ ಮೇಲೆ ನಾವು ಹೆಚ್ಚಿನ ಎಚ್ಚರವಹಿಸಿದ್ರೆ ದೆಹಲಿಯ ಘಟನೆ ತಪ್ಪಿಸಬಹುದಿತ್ತು. ಇಂತಹ ಘಟನೆಗಳು ನಿರಂತರವಾಗಿ ಆಗುತ್ತಿದೆ. ಯಾರು ಕೂಡ ಇದರ ಹೊಣೆ ತೆಗೆದುಕೊಳ್ಳುತ್ತಿಲ್ಲ. ಪಹಲ್ಗಾಮ್ ಘಟನೆ, ದೆಹಲಿ ಘಟನೆ ಯಾರಾದರು ಹೊಣೆ ಹೊರಬೇಕು. ಈ ವಿಫಲತೆಗೆ ಯಾರು ಜವಾಬ್ದಾರಿ ಅಂತ ಹೇಳಬೇಕು. ಮುಂದೆ ಇಂತಹ ಘಟನೆಗಳು ಆಗದಂತೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು" ಎಂದು ಕಿಡಿಕಾರಿದರು.