ನವದೆಹಲಿ/ಬೆಂಗಳೂರು, ನ. 10 (DaijiworldNews/AK): ರಾಷ್ಟ್ರರಾಜಧಾನಿಯ ಹೃದಯಭಾಗ ಕೆಂಪು ಕೋಟೆ ಬಳಿ ಕಾರು ಸ್ಫೋಟವಾಗಿದೆ. ಈ ಘಟನೆಯಿಂದ ಹತ್ತಿರದ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಮಾಹಿತಿ ಪ್ರಕಾರ ದುರಂತದಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು 11 ಜನರು ಗಾಯಗೊಂಡಿದ್ದಾರೆ. ಸ್ಫೋಟದ ರಭಸಕ್ಕೆ ಮೃತದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ತಿಳಿದುಬಂದಿದೆ.



ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ಆರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಹಿರಿಯ ಅಧಿಕಾರಿಗಳು ಸಹ ಸ್ಥಳಕ್ಕೆ ದೌಡಾಯಿಸಿದ್ದು, ಘಟನೆ ಕಾರಣ ಏನೆಂದು ತನಿಖೆ ನಡೆಯುತ್ತಿದೆ. ಸ್ಫೋಟದ ಪರಿಣಾಮವಾಗಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ ಆರು ವಾಹನಗಳು ಮತ್ತು ಹತ್ತಿರದಲ್ಲಿ ನಿಲ್ಲಿಸಿದ್ದ ಮೂರು ಆಟೋರಿಕ್ಷಾಗಳು ಸುಟ್ಟುಹೋಗಿವೆ.
ದೆಹಲಿಯಲ್ಲಿ ಸ್ಫೋಟ ಸಂಭವಿಸಿದ ಬೆನ್ನಲ್ಲೇ ವಾಣಿಜ್ಯ ನಗರಿ ಮುಂಬೈ, ಉತ್ತರ ಪ್ರದೇಶ ಹಾಗೂ ಕರ್ನಾಟಕದ ಬೆಂಗಳೂರಿನಲ್ಲೂ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಅಧಿಕಾರಿಗಳು ರಾಜಧಾನಿಯಾದ್ಯಂತ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ, ತನಿಖೆ ಮುಂದುವರಿದಂತೆ ಎಲ್ಲಾ ಮೆಟ್ರೋ ನಿಲ್ದಾಣಗಳು ಮತ್ತು ಪ್ರಮುಖ ಸಾರ್ವಜನಿಕ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೂಡಲೇ ಠಾಣಾ ವ್ಯಾಪ್ತಿಯಲ್ಲಿ ಗಸ್ತು ತಿರುಗುವಂತೆ ಎಚ್ಚರಿಸಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರದ ಅಧೀನ ಕಚೇರಿಗಳಿಗೆ ಭದ್ರತೆ ಒದಗಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳು ಮತ್ತು ಲಾಡ್ಜ್ನಲ್ಲಿ ತಂಗಿರೋ ಹೊರ ರಾಜ್ಯದವರ ಮೇಲೆ ನಿಗಾ ವಹಿಸುವಂತೆ ಹಾಗೂ ರಾತ್ರಿ ಗಸ್ತು ಹೆಚ್ಚಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.