ಹೈದರಾಬಾದ್, ನ. 10 (DaijiworldNews/AK): ತುಪ್ಪ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುಮಲ ತಿರುಪತಿ ದೇವಸ್ಥಾನಕ್ಕೆ ಐದು ವರ್ಷಗಳಿಗೂ ಹೆಚ್ಚು ಕಾಲ ಕಲಬೆರಕೆ ತುಪ್ಪವನ್ನು ಪೂರೈಸಲಾಗಿದೆ ಎಂದು ವಿಶೇಷ ತನಿಖಾ ತಂಡ ತಿಳಿಸಿದೆ.

ಎಸ್ಐಟಿ ನಡೆಸಿರುವ ತನಿಖೆ ವೇಳೆ ತುಪ್ಪದಲ್ಲಿ ರಾಸಾಯನಿಕ ಬಳಕೆಯಾಗಿರೋದು ಪತ್ತೆಯಾಗಿದೆ. ಟಿಟಿಡಿಗೆ ತುಪ್ಪ ಪೂರೈಸುವ ಒಪ್ಪಂದ ಮಾಡಿಕೊಂಡಿದ್ದ ಖಾಸಗಿ ಕಂಪನಿಯು ಡೈರಿಯಲ್ಲಿ ಮೊನೊಡಿಗ್ಲಿಸರೈಡ್ಗಳು ಮತ್ತು ಅಸಿಟಿಕ್ ಆಸಿಡ್ ಎಸ್ಟರ್ನಂತಹ ರಾಸಾಯನಿಕಗಳು ಬಳಕೆಯಾಗಿರುವುದು ತಿಳಿದುಬಂದಿದೆ.
ಉತ್ತರಾಖಂಡದ ಭಗವಾನ್ಪುರದಲ್ಲಿ ಸ್ಥಾಪಿಸಲಾದ ಈ ಡೈರಿಯು ದೇಶದ ಯಾವುದೇ ಮೂಲದಿಂದ ಒಂದೇ ಒಂದು ಹನಿ ಹಾಲು ಅಥವಾ ಬೆಣ್ಣೆಯನ್ನು ಖರೀದಿಸಿಲ್ಲ. ಆದರೂ ಸಹ 2019 ಮತ್ತು 2024ರ ನಡುವೆ ಟಿಟಿಡಿಗೆ ಅಂದಾಜು 68 ಲಕ್ಷ ಕಿಲೋಗ್ರಾಂಗಳಷ್ಟು ತುಪ್ಪವನ್ನು ಪೂರೈಸಿದ್ದು, ಒಟ್ಟು 250 ಕೋಟಿ ರೂ. ಮೌಲ್ಯದ ತುಪ್ಪವನ್ನು ಮಾರಾಟ ಮಾಡಿದೆ ಎಂದು ನೆಲ್ಲೂರಿನ ಎಸಿಬಿ ನ್ಯಾಯಾಲಯಕ್ಕೆ ಸಲ್ಲಿಸಿದ ತನ್ನ ರಿಮಾಂಡ್ ವರದಿಯಲ್ಲಿ ಎಸ್ಐಟಿ ಉಲ್ಲೇಖಿಸಿದೆ.
ಈ ಹಿಂದೆ ಕರ್ನಾಟಕ ನಂದಿನಿ ತುಪ್ಪ ದರ ಹೆಚ್ಚು ಎಂದು ತಿರಸ್ಕರಿಸಿದ್ದ ತಿರುಮಲ ತಿರುಪತಿ ದೇಗುಲದ ಅಧಿಕಾರಿಗಳಿಗೆ ಅಗ್ಗದ ದರದಲ್ಲಿ ತುಪ್ಪ ರವಾನೆ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ ಖಾಸಗಿ ಡೈರಿ ಪಂಗನಾಮ ಹಾಕಿದ್ದು, ಹಾಲನ್ನೇ ಬಳಸದೇ ರಾಸಾಯನಿಕಗಳಿಂದ ತುಪ್ಪ ತಯಾರಿಸಿ ಭಕ್ತರ ನಂಬಿಕೆಗೆ ದ್ರೋಹ ಬಗೆದಿರುವುದು ತನಿಖೆಯಿಂದ ಬಯಲಾಗಿದೆ. 2022ರಲ್ಲಿ ಈ ಡೈರಿಯನ್ನು ಕಪ್ಪುಪಟ್ಟಿಗೆ ಸೇರಿಸಿದರೂ, ಅದು ಇತರ ಡೈರಿಗಳ ಮೂಲಕ ತನ್ನ ವಂಚನೆಯನ್ನು ಮುಂದುವರಿಸಿತ್ತು. ಒಮ್ಮೆ ಟಿಟಿಡಿಯಿಂದ ತಿರಸ್ಕೃತಗೊಂಡ ಪ್ರಾಣಿ ಕೊಬ್ಬು ಮಿಶ್ರಿತ ತುಪ್ಪವನ್ನೇ ಮರಳಿ ಪೂರೈಸಿರುವುದು ಸಿಬಿಐ ತನಿಖೆಯಲ್ಲಿ ಬೆಳಕಿಗೆ ಬಂದಿದೆ.