ನವದೆಹಲಿ, ನ. 10 (DaijiworldNews/AK): ಕಾಂಗ್ರೆಸ್ ಜೈಲಿನಲ್ಲಿರುವ ಕೈದಿಗಳಿಗೆ ಐಷರಾಮಿ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದು ಕಾಂಗ್ರೆಸ್ನ ಹೊಸ ಗ್ಯಾರಂಟಿ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಆರೋಪಿಸಿದ್ದಾರೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಹೈ-ರಿಸ್ಕ್ ಕೈದಿಗಳಿಗೆ ಅನಧಿಕೃತ ಸೌಲಭ್ಯಗಳು ಒದಗಿಸಲಾಗುತ್ತಿದೆ ಎನ್ನುವ ವರದಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಉಗ್ರವಾದದ ಮೇಲೆ ಸಾಫ್ಟ್ ಕಾರ್ನರ್ ತೋರಿಸುತ್ತಿದೆ. ಇದು ಜೈಲನ್ನು ಪಾರ್ಟಿ ಹೌಸ್ ಆಗಿ ಪರಿವರ್ತಿಸುವ ಕಾಂಗ್ರೆಸ್ನ ಹೊಸ ಗ್ಯಾರಂಟಿ ಎಂದರು.
ಜೈಲಿನ ಒಳಗಿನಿಂದ ರೆಕಾರ್ಡ್ ಆದಂತೆ ಕಾಣುವ ವಿಡಿಯೋ ಕ್ಲಿಪ್ಗಳನ್ನು ಪ್ರದರ್ಶಿಸಿದ ಅವರು, ಐಸಿಸ್ ರಿಕ್ರೂಟರ್ ಎಂದು ಹೇಳಲಾದ ಝುಹಾಬ್ ಹಮೀದ್ ಶಕೀಲ್ ಮನ್ನಾ ಮೊಬೈಲ್ ಫೋನ್ ಬಳಸುತ್ತಿರುವುದು ಕಂಡುಬಂದಿದೆ. ಇಂತಹ ಉಗ್ರರನ್ನು ಹೈ-ಸೆಕ್ಯುರಿಟಿ ಸೆಲ್ಗಳಲ್ಲಿ ಇರಿಸಬೇಕು. ಆದರೆ ಅವರು ಫೋನ್ ಬಳಸಿ ಹೊರಗೆ ಸಂಪರ್ಕಿಸುತ್ತಾ ರಿಕ್ರೂಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮತ್ತೊಂದು ಕ್ಲಿಪ್ನಲ್ಲಿ ಸೀರಿಯಲ್ ರೇಪಿಸ್ಟ್ ಉಮೇಶ್ ರೆಡ್ಡಿ ಮೊಬೈಲ್ ಬಳಸುತ್ತಿದ್ದು, ಅದರ ಹಿಂದೆ ಟಿವಿ ಕಾಣುತ್ತಿದೆ. ಅವರಿಗೆ ಇಷ್ಟದ ಊಟವನ್ನೇ ಸರಬರಾಜು ಮಾಡಲಾಗುತ್ತಿದೆ. ಮೂರನೇ ವಿಡಿಯೋದಲ್ಲಿ ಕೈದಿಗಳು ಆಹಾರ ಮತ್ತು ಮದ್ಯದೊಂದಿಗೆ ‘ಪಾರ್ಟಿ’ ಮಾಡುತ್ತಿರುವುದು ಕಂಡುಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ ಪರಮೇಶ್ವರ್ ಇದರ ಹೊಣೆ ಹೊತ್ತು ರಾಜೀನಾಮೆ ನೀಡುತ್ತಾರ? ಇಂತಹ ವಿವಿಐಪಿ ಸೌಲಭ್ಯಗಳು ಸರ್ಕಾರದ ಅರಿವಿಗೆ ಬಾರದೆ ನಡೆಯಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಈ ಕುರಿತು ಏನು ಕ್ರಮ ಕೈಗೊಳ್ಳಲಿದೆ ಎಂದು ಪೂನಾವಾಲಾ ಪ್ರಶ್ನಿಸಿದರು.