ಬೆಂಗಳೂರು, ನ. 09 (DaijiworldNews/TA): “ಹಿಂದೂ ಭಾವನೆಯನ್ನು ಮರೆತಾಗಲೆಲ್ಲ ಭಾರತ ಒಡೆದಿದೆ, ಕುಟುಂಬಗಳು ವಿಭಜನೆಯಾಗಿವೆ. ನಮ್ಮ ರಾಷ್ಟ್ರದ ಆಲೋಚನೆ ಏಕತೆಯಾದಾಗ ಮಾತ್ರ ಭಾರತ ಬಲವಾಗಿರುತ್ತದೆ,” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದರು.

ಆರ್ಎಸ್ಎಸ್ ಶತಮಾನೋತ್ಸವದ ಅಂಗವಾಗಿ ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ ‘ಸಂಘದ 100 ವರ್ಷ ಪಯಣ – ನವ ಕ್ಷಿತಿಜ’ ಶೀರ್ಷಿಕೆಯ ಎರಡು ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಅವರು ಮಾತನಾಡಿದರು.
“ಹಿಂದೂ ಎಂದು ಕರೆಯಲು ಇಷ್ಟವಿಲ್ಲದಿದ್ದರೆ ಭಾರತ ಅಥವಾ ಇಂಡಿಯಾ ಎಂದಾದರೂ ಕರೆಯಿರಿ. ಆದರೆ ಆಲೋಚನೆ ಮಾತ್ರ ಒಂದು ರಾಷ್ಟ್ರವಾಗಿರಲಿ, ಸಮಾಜದಲ್ಲಿ ಸತ್ಕಾರ್ಯಗಳಲ್ಲಿ ತೊಡಗಿರುವ ಸಜ್ಜನ ಶಕ್ತಿ ನಮ್ಮ ಜೊತೆಗೆ ಕೈಜೋಡಿಸಬಹುದು ಅಥವಾ ತಮ್ಮ ರೀತಿಯಲ್ಲಿ ಕೆಲಸ ಮಾಡಬಹುದು. ಸಮಾಜಕ್ಕೆ ಒಳಿತು ಮಾಡುವವರು ನಮ್ಮ ಕಾರ್ಯದ ಭಾಗವೇ ಆಗಿದ್ದಾರೆ,” ಎಂದರು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವಾ ಚಟುವಟಿಕೆಗಳಲ್ಲಿ ತೊಡಗಿರುವವರ ಸಹಭಾಗಿತ್ವದ ಅಗತ್ಯವನ್ನೂ ಅವರು ಒತ್ತಿಹೇಳಿದರು.
ಭಾಗವತ್ ಅವರು ಸಂಘದ ಚಟುವಟಿಕೆಗಳ ಕುರಿತು ಸ್ಪಷ್ಟನೆ ನೀಡುತ್ತಾ, “ಎಲ್ಲರೂ ಗಣವೇಶ ಧರಿಸಬೇಕು ಎನ್ನುವುದಿಲ್ಲ. ದೇಶದಲ್ಲಿ ಧನಾತ್ಮಕ ವಾತಾವರಣ ನಿರ್ಮಾಣವಾಗಬೇಕು ಎಂಬುದೇ ನಮ್ಮ ಆಶಯ. ಸಂಘ ನೂರು ವರ್ಷ ಪೂರೈಸಿದರೂ ಕೆಲವರಿಗೆ ಸರಿಯಾದ ಮಾಹಿತಿ ಇಲ್ಲ. ಸರಿಯಾದ ಮಾಹಿತಿಯ ಆಧಾರದಲ್ಲಿ ಯಾರಾದರೂ ಪರ ಅಥವಾ ವಿರುದ್ಧ ನಿಲುವು ತಳೆಯಬಹುದು,” ಎಂದು ಹೇಳಿದರು.
ಶತಮಾನೋತ್ಸವ ಯೋಜನೆಗಳ ಕುರಿತು ಮಾತನಾಡುತ್ತಾ ಅವರು, “ಸಮಾಜದ ಒಳಿತಿಗಾಗಿ ಸಜ್ಜನ ಶಕ್ತಿಯ ಸಹಯೋಗ ಪಡೆಯುವುದು ಹಾಗೂ ಧನಾತ್ಮಕತೆಯನ್ನು ಮೂಡಿಸುವ ಕೆಲಸಗಳು ಕೈಗೊಳ್ಳಲಾಗುತ್ತಿವೆ,” ಎಂದು ಹೇಳಿದರು. ಮುಂದುವರಿದು, “ಪ್ರತಿ ತಿಂಗಳು ಸದ್ಭಾವನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ವಿವಿಧ ಜಾತಿ ಮತ್ತು ಸಮುದಾಯ ನಾಯಕರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನ ಮಾಡಲಾಗುತ್ತದೆ,” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರ್ಎಸ್ಎಸ್ ಶತಮಾನೋತ್ಸವದ ಅಂಗವಾಗಿ ದೇಶಾದ್ಯಂತ ನಡೆಯಲಿರುವ ಸಾಮಾಜಿಕ ಮತ್ತು ಸೌಹಾರ್ದತಾ ಚಟುವಟಿಕೆಗಳ ಕುರಿತೂ ಚರ್ಚೆ ನಡೆಯಿತು.