ಬೆಂಗಳೂರು, ನ. 08 (DaijiworldNews/AK): ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಆಯೋಜಿಸಿದ್ದ ಎರಡು ದಿನಗಳ ಉಪನ್ಯಾಸ ಸರಣಿಯಲ್ಲಿ ಮಾತನಾಡಿದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಲವು ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಆರ್ಎಸ್ಎಸ್ ಜಗತ್ತಿನ ಯಾವುದೇ ವಿಶಿಷ್ಟ ಸಂಘಟನೆಗಿಂತ ಭಿನ್ನವಾಗಿದೆ. ಯಾವುದೇ ನಿರ್ದಿಷ್ಟ ಘಟನೆ ಅಥವಾ ಸನ್ನಿವೇಶಕ್ಕೆ ಪ್ರತಿಕ್ರಿಯೆಯಾಗಿ ಇದನ್ನು ರಚಿಸಲಾಗಿಲ್ಲ. ಇದು ಯಾರಿಗೋ ವಿರುದ್ಧವಾಗಿ ರೂಪುಗೊಂಡ ಸಂಘಟನೆಯೂ ಅಲ್ಲ. ಇಡೀ ಸಮಾಜವನ್ನು ಒಗ್ಗೂಡಿಸುವುದು ಇದರ ಉದ್ದೇಶ. ಸಂಘವು ಒಂದು ಪರಿಸ್ಥಿತಿಗೆ ಪ್ರತಿಕ್ರಿಯೆಯಲ್ಲ. ಸಂಘದ ಉದ್ದೇಶ ಎಂದಿಗೂ ವಿನಾಶವಲ್ಲ. ನಮ್ಮ ಏಕೈಕ ಗುರಿ ಇಡೀ ಹಿಂದೂ ಸಮಾಜವನ್ನು ಸಂಘಟಿಸುವುದು ಎಂದು ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ “100 ವರ್ಷಗಳ ಸಂಘ ಪಯಣ: ಹೊಸ ದಿಗಂತಗಳು ಎಂಬ ಶೀರ್ಷಿಕೆಯ ಎರಡು ದಿನಗಳ ಉಪನ್ಯಾಸ ಸರಣಿಯಲ್ಲಿ ಆರ್ಎಸ್ಎಸ್ ಸರಸಂಘಚಾಲಕ್ ಡಾ. ಮೋಹನ್ ಭಾಗವತ್ ಮಾತನಾಡಿದರು. ನಾವು ಧೈರ್ಯಶಾಲಿಗಳು ಮತ್ತು ಸಮೃದ್ಧರಾಗಿದ್ದರೂ ಪದೇಪದೆ ಆಕ್ರಮಣಕಾರರು ನಮ್ಮ ಮೇಲೆ ಆಕ್ರಮಣ ನಡೆಸಿದರು. ನಾವು ಯಾರೆಂಬುದನ್ನು ನಾವು ಮರೆತಿದ್ದೇವೆ. ಭಾರತವು ತನ್ನ ಸಾಮೂಹಿಕ ಉದ್ದೇಶದ ಪ್ರಜ್ಞೆಯನ್ನು ಪುನರುಜ್ಜೀವನಗೊಳಿಸಬೇಕು ಎಂದು ಮೋಹನ್ ಭಾಗವತ್ ಒತ್ತಿ ಹೇಳಿದರು.