ತಿರುವನಂತಪುರಂ, ನ. 08 (DaijiworldNews/AA): ದೆವ್ವ ಬಿಡಿಸೋಕೆ ಮಹಿಳೆಗೆ ಬೀಡಿ ಸೇದಿ, ಮದ್ಯ ಸೇವಿಸುವಂತೆ ಗಂಟೆಗಟ್ಟಲೇ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿರುವ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದ್ದು, ಪತಿ ಸೇರಿ ಮೂವರನ್ನು ಬಂಧಿಸಲಾಗಿದೆ.

ಪ್ರಕರಣ ಸಂಬಂಧ ಮಹಿಳೆಯ ಪತಿ ಅಖಿಲ್ ದಾಸ್ (26), ಪತಿಯ ತಂದೆ ದಾಸ್ (54) ಹಾಗೂ ಮಾಂತ್ರಿಕ ಶಿವದಾಸ್ (54) ಬಂಧಿತರು.
ಕಳೆದ ವಾರ ಮಹಿಳೆಯ ಅತ್ತೆ ಮಾಂತ್ರಿಕನ ಬಳಿ ಹೋಗಿ ತಮ್ಮ ಸೊಸೆಯ ಮೇಲೆ ಮೃತ ಸಂಬಂಧಿಕರ ದೆವ್ವ ಆವರಿಸಿಕೊಂಡಿದೆ ಎಂದು ತಿಳಿಸಿ, ಮಾಟಮಂತ್ರಕ್ಕೆ ವ್ಯವಸ್ಥೆ ಮಾಡಿಸಿದ್ದರು. ಅದರಂತೆ ಬೆಳಗ್ಗೆ 11 ಗಂಟೆಗೆ ಮಾಟಮಂತ್ರ ಆರಂಭವಾಗಿ ರಾತ್ರಿಯವರೆಗೆ ನಡೆದಿದೆ ಎಂದು ಪೊಲೀಸರ ಮಾಹಿತಿ ನೀಡಿದ್ದಾರೆ.
ಮಾಟಮಂತ್ರ ಮಾಡುವಾಗ ನನಗೆ ಬಲವಂತವಾಗಿ ಮದ್ಯ ಕುಡಿಸಿದರು, ಜೊತೆಗೆ ಬೀಡಿ ಸೇದಿಸಿದರು. ಬೂದಿಯನ್ನು ತಿನ್ನಿಸಿದರು. ನನ್ನ ಮೇಲೆ ಸುಟ್ಟ ಗಾಯಗಳನ್ನು ಮಾಡಿ, ದೈಹಿಕವಾಗಿ ಚಿತ್ರಹಿಂಸೆ ನೀಡಿದರು. ಕೊನೆಗೆ ನಾನು ಪ್ರಜ್ಞೆ ಕಳೆದುಕೊಂಡೆ ಎಂದು ಮಹಿಳೆ ತಿಳಿಸಿದ್ದಾಳೆ.
ಘಟನೆಯ ಕುರಿತು ಮಹಿಳೆಯ ತಂದೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಪ್ರಮುಖ ಆರೋಪಿ ಮಾಂತ್ರಿಕ ಫೋನ್ ಸ್ವಿಚ್ ಆಫ್ ಮಾಡಿ, ನಾಪತ್ತೆಯಾಗಿದ್ದ. ಕೊನೆಗೆ ಮಾಂತ್ರಿಕನನ್ನು ಪೊಲೀಸರು ತಿರುವಲ್ಲಾದ ಮುತ್ತೂರು ಪ್ರದೇಶದಲ್ಲಿ ಬಂಧಿಸಿದ್ದಾರೆ. ಸದ್ಯ ಮಹಿಳೆಯ ಅತ್ತೆ ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಶೋಧಕಾರ್ಯ ಮುಂದುವರೆದಿದೆ.