ಬೆಂಗಳೂರು,ನ. 06 (DaijiworldNews/AK): ಕಬ್ಬು ಬೆಳೆಗಾರರ ವಿಚಾರದಲ್ಲಿ ರಾಜ್ಯ ಸರಕಾರ ಜವಾಬ್ದಾರಿಯಿಂದ ವರ್ತಿಸಿ ಸಂಧಾನ ನಡೆಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಇಂದು ತಿಳಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರಕಾರ, ಕೆಲವು ಸಚಿವರು, ಮುಖ್ಯಮಂತ್ರಿಗಳು ಈ ಕಬ್ಬು ಬೆಲೆ ನಿಗದಿ ಬಗ್ಗೆ ಹೇಳಿಕೆ ಕೊಡುತ್ತಿದ್ದಾರೆ. ಕಬ್ಬು ವರ್ಷದ ಪ್ರಾರಂಭಕ್ಕೆ ಮೊದಲು ಕೇಂದ್ರವು ಎಫ್ಆರ್ಪಿ ನಿಗದಿ ಮಾಡುತ್ತದೆ. ಈಗ ನಾವು 350 ರೂ. ಎಫ್ಆರ್ಪಿ ನಿಗದಿ ಮಾಡಿದ್ದೇವೆ ಎಂದು ವಿವರಿಸಿದರು.
ಇದರ ಜೊತೆಗೆ ಎಥೆನಾಲ್ ಖರೀದಿ ಶುರು ಮಾಡಿದ ಬಳಿಕ ಮೊದಲು 3-4 ವರ್ಷ ಹಣ ಪಾವತಿ ಬಾಕಿ ಇರುತ್ತಿತ್ತು. ಈಗ ಕಳೆದ ಸಕ್ಕರೆ ವರ್ಷದ್ದು, 97.2 ಶೇಕಡಾ ಪಾವತಿ ಆಗಿದೆ. ರಾಜ್ಯ ಸರಕಾರವು ಕಾರ್ಖಾನೆಗಳ ಮಾಲೀಕರು, ರೈತರ ಜೊತೆ ಮಾತುಕತೆ ಮಾಡಿ ಸೂಕ್ತ ಸಂಧಾನ ಮಾಡಬೇಕು. ಸುಮ್ಮಸುಮ್ಮನೇ ಹೇಳಿಕೆ ಕೊಟ್ಟು ಪರಿಸ್ಥಿತಿಯನ್ನು ಕೆಡಿಸುವ ಕೆಲಸ ಮಾಡಬಾರದು ಎಂದು ಸಲಹೆ ನೀಡಿದರು.
ಕಬ್ಬು ಕಾರ್ಖಾನೆಗಳ ಮಾಲೀಕರು ರಫ್ತಿಗೆ ಅವಕಾಶ ಕೋರಿದ್ದಾರೆ. 15ರಿಂದ 20 ಲಕ್ಷ ಟನ್ ಸಕ್ಕರೆ ಹೆಚ್ಚುವರಿ ಇದೆ ಎಂದು ಅಂದಾಜು ಮಾಡಿದ್ದು, ಅದರಲ್ಲಿ 15 ಲಕ್ಷ ಟನ್ ರಫ್ತಿಗೆ ಅವಕಾಶ ಮಾಡಲಿದ್ದೇವೆ ಎಂದು ಪ್ರಕಟಿಸಿದರು. ಇದಲ್ಲದೇ ಮೊಲಾಸಿಸ್ ರಫ್ತಿಗೆ ಅನುಮತಿಯನ್ನು ಕೇಳಿದ್ದು, ನಾವು ಈಗಾಗಲೇ ಕೊಟ್ಟಿದ್ದೇವೆ ಎಂದರು.
ರೈತರು ಪ್ರತಿ ಟನ್ಗೆ 3,500 ರೂ. ಕೇಳುತ್ತಿದ್ದು, ಕೇಂದ್ರ ಸರಕಾರ 350 ರೂ. ನೀಡಿದೆ. ಅದರ ಜೊತೆಗೆ ರಫ್ತಿಗೂ ಅವಕಾಶ ಕೊಟ್ಟಿದೆ. ರಾಜ್ಯ ಸರಕಾರವು ನ್ಯಾಯಯುತ ಬೇಡಿಕೆ ಪರಿಹರಿಸಲಿ.
ಮುಖ್ಯಮಂತ್ರಿಗಳು ಮತ್ತು ಸಚಿವರು ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು. ವಿನಾಕಾರಣ ಕಾಲಹರಣ ಸಲ್ಲದು ಎಂದು ನುಡಿದರು. ರಾಜಕೀಯ ಹೇಳಿಕೆ ಮೂಲಕ ಕಾಲಹರಣ ಮಾಡುವುದು ಒಂದು ರಾಜ್ಯ ಸರಕಾರಕ್ಕೆ ಶೋಭೆ ತರುವುದಿಲ್ಲ ಎಂದು ತಿಳಿಸಿದರು.