ಮುಂಬೈ, ನ. 06 (DaijiworldNews/TA): ವಡಾಲಾ ಡಿಪೋದಲ್ಲಿ ಬುಧವಾರ ಬೆಳಿಗ್ಗೆ ನಡೆದ ಟೆಸ್ಟ್ ರನ್ ವೇಳೆ ಹೊಸದಾಗಿ ಖರೀದಿಸಿದ ಮೊನೊರೈಲ್ ರೈಲು ಹಳಿತಪ್ಪಿ ಅಪಘಾತಕ್ಕೀಡಾಗಿದೆ. ಖಾಲಿ ರೈಲು ಬೀಮ್ಗೆ ಡಿಕ್ಕಿ ಹೊಡೆದು ರೈಲು ಕ್ಯಾಪ್ಟನ್ ಸೇರಿದಂತೆ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ. ರೈಲಿನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲವೆಂಬುದು ಅಧಿಕಾರಿಗಳ ಸ್ಪಷ್ಟನೆ. ಈ ಘಟನೆದಲ್ಲಿ ಹೊಸದಾಗಿ ಖರೀದಿಸಿದ ಬೋಗಿಗೂ ಭಾರೀ ಹಾನಿಯಾಗಿದೆ.

ಮಹಾ ಮುಂಬೈ ಮೆಟ್ರೋ ಆಪರೇಷನ್ ಕಾರ್ಪೊರೇಷನ್ ಲಿಮಿಟೆಡ್ ಮಾಹಿತಿ ಪ್ರಕಾರ, ಅಪಘಾತವು ಬೆಳಿಗ್ಗೆ ಸುಮಾರು 9 ಗಂಟೆಯ ಸಮಯದಲ್ಲಿ ಟ್ರಯಲ್ ರನ್ ವೇಳೆ ನಡೆದಿದೆ. ರೈಲು ಪ್ಲಾಟ್ಫಾರ್ಮ್ನಿಂದ ಹೊರಟ ತಕ್ಷಣ ಗೈಡ್ ಬೀಮ್ ಸ್ವಿಚ್ ಅಕಸ್ಮಾತ್ತಾಗಿ ದಿಕ್ಕು ಬದಲಾಯಿಸಿದ ಪರಿಣಾಮ, ಮೊದಲ ಕೋಚ್ ಹಳಿ ತಪ್ಪಿ ಬೀಮ್ಗೆ ಡಿಕ್ಕಿ ಹೊಡೆದು ಅದರ ಮುಂಭಾಗಕ್ಕೆ ಹಾನಿಯಾಗಿದೆ.
ಘಟನೆಯಲ್ಲಿ ರೈಲು ಕ್ಯಾಪ್ಟನ್, ಒಬ್ಬ ಎಂಜಿನಿಯರ್ ಹಾಗೂ ಮತ್ತೊಬ್ಬ ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಗಾಯಾಳುಗಳನ್ನು ಸೊಹೈಲ್ ಪಟೇಲ್ (27), ಬುಧಾಜಿ ಪರಬ್ (26) ಮತ್ತು ವಿ. ಜಗದೀಶ್ (28) ಎಂದು ಗುರುತಿಸಲಾಗಿದೆ. ಸಿಯಾನ್ ಆಸ್ಪತ್ರೆಯ ಪ್ರಕಾರ, ಮೂವರಿಗೂ ಸಣ್ಣ ಪ್ರಮಾಣದ ಒಳಗಾಯಗಳಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅಪಘಾತದ ಪರಿಣಾಮವಾಗಿ ರೈಲಿನ ಅಂಡರ್ಗೇರ್, ಕಪ್ಲಿಂಗ್, ಬೋಗಿಗಳು ಹಾಗೂ ಚಕ್ರದ ಭಾಗಗಳು ಹಾನಿಗೊಳಗಾಗಿವೆ. ಕ್ರೇನ್ ಸಹಾಯದಿಂದ ಹಳಿ ತಪ್ಪಿದ ಕೋಚ್ ಅನ್ನು ಸ್ಥಳಾಂತರಿಸಲಾಯಿತು.
ಮಹಾ ಮುಂಬೈ ಮೆಟ್ರೋ ಆಪರೇಷನ್ ಕಾರ್ಪೊರೇಷನ್ ಲಿಮಿಟೆಡ್ ಮೇಧಾ ಎಸ್ಎಂಎಚ್ ರೈಲ್ ಪ್ರೈವೇಟ್ ಲಿಮಿಟೆಡ್ನಿಂದ ತಲಾ ರೂ.55 ಕೋಟಿ ಮೌಲ್ಯದ ನಾಲ್ಕು ಬೋಗಿಗಳ 10 ಹೊಸ ರೈಲುಗಳನ್ನು ಖರೀದಿಸಿದೆ. ಈ ಹೊಸ ರೈಲುಗಳಲ್ಲಿ ಒಂದೇ ಬುಧವಾರ ಅಪಘಾತಕ್ಕೀಡಾಗಿದೆ. ತಾಂತ್ರಿಕ ದೋಷಗಳ ಹಿನ್ನೆಲೆಯಲ್ಲಿ ಮುಂಬೈ ಮಾನೋರೈಲ್ ಸೇವೆಗಳು ಸೆಪ್ಟೆಂಬರ್ 20ರಿಂದಲೇ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಸಿಸ್ಟಮ್ ಅಪ್ಗ್ರೇಡ್ ಕೆಲಸಗಳು ಪೂರ್ಣಗೊಳ್ಳುವವರೆಗೂ ಸೇವೆ ಪುನರಾರಂಭವಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದ ನಂತರ ಶಿವಸೇನೆ (ಯುಬಿಟಿ) ಕಾರ್ಯಕರ್ತರು ವಡಾಲಾ ಡಿಪೋದ ಹೊರಗೆ ಪ್ರತಿಭಟನೆ ನಡೆಸಿ ಮುಂಬೈ ಮಾನೋರೈಲ್ ಸೇವೆಗಳನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಪ್ರಾರಂಭಿಸಲಾಗಿದೆ.