ನವದೆಹಲಿ,ನ. 06 (DaijiworldNews/ AK): ರಾಜ್ಯದಲ್ಲಿ ಯಾವುದೇ ನವೆಂಬರ್ ಕ್ರಾಂತಿ ಇಲ್ಲ. ಬದಲಾಗಿ 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ವಾಪಸ್ ಬರುವ ಮೂಲಕ ಕ್ರಾಂತಿ ಆಗಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಅಂತಾ ಸಿಎಂ ಸಿದ್ದರಾಮಯ್ಯ ಅಥವಾ ನಾನು ಹೇಳಿದ್ದೀವಾ ಎಂದು ಪ್ರಶ್ನಿಸಿದ್ದಾರೆ. 5 ವರ್ಷ, 10 ವರ್ಷ, 15 ವರ್ಷ ಆಗಲಿ. ನಾಯಕತ್ವ ಬಗ್ಗೆ ಹೈಕಮಾಂಡ್ ಹೇಗೆ ಹೇಳುತ್ತೆ ಹಾಗೆ ನಾವು ನಡೆದುಕೊಳ್ಳುತ್ತೇವೆ. ಪಕ್ಷದ ಚೌಕಟ್ಟು ಬಿಟ್ಟು ನಾನು ಎಂದೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿ ಹೈಕಮಾಂಡ್ ಭೇಟಿ ವಿಚಾರವಾಗಿ ಮಾತನಾಡಿ, ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನ ಭೇಟಿಯಾಗಿಲ್ಲ. ಪಕ್ಷ ಸಂಘಟನೆ ವಿಚಾರವಾಗಿ ಹೈಕಮಾಂಡ್ ನಾಯಕರನ್ನು ಭೇಟಿ ಆಗುತ್ತೇನೆ. ಸಚಿವ ಸಂಪುಟ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಪಥಸಂಚಲನ ಕುರಿತು ಮಾತನಾಡಿ, ಆರ್ಎಸ್ಎಸ್ ಆಗಲಿ ಅಥವಾ ಯಾರೇ ಆಗಲಿ ಅನುಮತಿ ತೆಗದುಕೊಂಡು ಕಾರ್ಯಕ್ರಮ ಮಾಡಲಿ ಎಂದು ಹೇಳಿದ್ದೆವು. ಜಗದೀಶ್ ಶೆಟ್ಟರ್ ಮಾಡಿದ ಆದೇಶಕ್ಕೆ ಬದ್ಧ ಎಂದು ಹೇಳಿದ್ದೆವು. ಹೈಕೋರ್ಟ್ನಲ್ಲಿ ಏನಾಗಿದೆ ಎಂಬುದನ್ನು ನಮ್ಮ ಕಾನೂನು ತಂಡ ನೋಡಿಕೊಳ್ಳಲಿದೆ ಎಂದು ಹೇಳಿದ್ದಾರೆ.