ತೆಲಂಗಾಣ, ನ. 06 (DaijiworldNews/TA): ಇರುವೆಗಳ ಭೀತಿಯಿಂದ ಬಳಲುತ್ತಿದ್ದ ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಅಮೀನ್ಪುರದಲ್ಲಿ ನಡೆದಿದೆ. ಮೃತೆಯಾಗಿ ಗುರುತಿಸಲ್ಪಟ್ಟಿರುವವರು ಮನೀಷಾ (25) ಎಂದು ಪೊಲೀಸರು ತಿಳಿಸಿದ್ದಾರೆ.

ಮನೀಷಾ, ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸ ಮುಗಿಸಿ ಮನೆಗೆ ಹಿಂತಿರುಗಿದ ಪತಿ ಶ್ರೀಕಾಂತ್, ಮಲಗುವ ಕೋಣೆಯ ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಗಮನಿಸಿ ಸ್ಥಳೀಯರ ಸಹಾಯದಿಂದ ಬಾಗಿಲು ಒಡೆದಾಗ ಪತ್ನಿ ನೇಣು ಬಿಗಿದುಕೊಂಡಿರುವುದು ಕಂಡುಬಂದಿತು.
ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ಪರಿಶೀಲಿಸಿ, ಶವದ ಪಕ್ಕದಲ್ಲಿ ದೊರೆತ ಪತ್ರವನ್ನು ವಶಪಡಿಸಿಕೊಂಡಿದ್ದಾರೆ. ಆ ಪತ್ರದಲ್ಲಿ ಮನೀಷಾ ಬರೆದಿರುವಂತೆ, “ಶ್ರೀ… ಕ್ಷಮಿಸಿ… ನಾನು ಇರುವೆಗಳ ಜೊತೆ ಬದುಕಲು ಸಾಧ್ಯವಿಲ್ಲ. ಅನ್ವಿಯನ್ನು ನೋಡಿಕೊಳ್ಳಿ… ದಯವಿಟ್ಟು ಅನ್ನಾವರಂ, ತಿರುಪತಿ ಮತ್ತು ಯೆಲ್ಲಮ್ಮನನ್ನು ನೋಡಿಕೊಳ್ಳಿ,” ಎಂದು ಉಲ್ಲೇಖಿಸಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮನೀಷಾ ಅವರು ಕೆಲವು ಕಾಲದಿಂದ ಮೈರ್ಮೆಕೊಫೋಬಿಯಾ ಎಂಬ ಇರುವೆಗಳ ಬಗ್ಗೆ ತೀವ್ರ ಭಯದಿಂದ ಬಳಲುತ್ತಿದ್ದರು. ಈ ಸಮಸ್ಯೆಗೆ ಚಿಕಿತ್ಸೆಗಾಗಿ ಕುಟುಂಬದವರು ಅವರನ್ನು ಹಲವು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿದ್ದರು ಹಾಗೂ ಕೌನ್ಸೆಲಿಂಗ್ ಸಹ ನೀಡಲಾಗಿತ್ತು, ಆದರೆ ಯಾವುದೇ ಪರಿಣಾಮ ಕಂಡುಬರಲಿಲ್ಲ.
ಈ ಹಿನ್ನೆಲೆಯಲ್ಲಿ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದ ಮನೀಷಾ ತಮ್ಮ ಜೀವವನ್ನೇ ಬಲಿಯಾಗಿ ಕೊಟ್ಟಿದ್ದಾರೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮೈರ್ಮೆಕೊಫೋಬಿಯಾ ಎಂದರೆ ಏನು? :
ಇದು ಇರುವೆಗಳ ಬಗ್ಗೆ ಅತಿಯಾದ ಹಾಗೂ ನಿಯಂತ್ರಣಾತೀತ ಭಯ ಅಥವಾ ಅಸಹನೆ. ಈ ಭಯವು ಕೆಲವರಲ್ಲಿ ಆತಂಕ, ಹೃದಯ ಬಡಿತ ಹೆಚ್ಚುವುದು, ಉಸಿರಾಟದ ತೊಂದರೆ, ನಿದ್ರಾಹೀನತೆ ಮತ್ತು ಗಾಬರಿ ಮುಂತಾದ ಲಕ್ಷಣಗಳಲ್ಲಿ ವ್ಯಕ್ತವಾಗಬಹುದು. ಸರಿಯಾದ ಮಾನಸಿಕ ಚಿಕಿತ್ಸೆ, ಕೌನ್ಸೆಲಿಂಗ್ ಹಾಗೂ ಗ್ರೇಡ್ಯುಯಲ್ ಎಕ್ಸ್ಪೋಸರ್ ಥೆರಪಿ ಮೂಲಕ ಈ ಭಯವನ್ನು ನಿವಾರಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ.