ನೊಯ್ಡಾ, ನ. 06 (DaijiworldNews/TA): ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿರುವ ಕ್ರೂರ ಕೊಲೆ ಪ್ರಕರಣ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ನೊಯ್ಡಾ ಸೆಕ್ಟರ್ -108ರ ಚರಂಡಿಯಲ್ಲಿ ತಲೆಯಿಲ್ಲದ ಹಾಗೂ ಸಂಪೂರ್ಣ ಬೆತ್ತಲೆ ಮಹಿಳೆಯ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ದೇಶದಾದ್ಯಂತ ಭಾರೀ ಆಕ್ರೋಶ ಮತ್ತು ಆತಂಕಕ್ಕೆ ಕಾರಣವಾಗಿದೆ.

ಸ್ಥಳೀಯರು ಇಂದು ಬೆಳಿಗ್ಗೆ ಚರಂಡಿಯಲ್ಲಿ ತೇಲುತ್ತಿದ್ದ ಶವವನ್ನು ನೋಡಿ ಬೆಚ್ಚಿಬಿದ್ದು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ಚರಂಡಿಯಿಂದ ಹೊರತೆಗೆದು ಶವಪರೀಕ್ಷೆಗೆ ಕಳುಹಿಸಿದ್ದಾರೆ. ಶವದ ಎರಡೂ ಕೈಗಳು ಮತ್ತು ತಲೆ ಸಂಪೂರ್ಣವಾಗಿ ಕತ್ತರಿಸಲ್ಪಟ್ಟಿದ್ದು, ದೇಹದ ಮೇಲೆ ಯಾವುದೇ ಬಟ್ಟೆ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ. ಪ್ರಾಥಮಿಕ ತನಿಖೆಯ ಪ್ರಕಾರ, ಮಹಿಳೆಯನ್ನು ಬೇರೆಡೆ ಕೊಲೆ ಮಾಡಿ ನಂತರ ಶವವನ್ನು ನೊಯ್ಡಾ ಸೆಕ್ಟರ್-108ರ ಚರಂಡಿಯಲ್ಲಿ ಎಸೆದಿರುವ ಸಾಧ್ಯತೆ ವ್ಯಕ್ತವಾಗಿದೆ. ಪೊಲೀಸರ ಪ್ರಕಾರ ಇದು ಅತಿ ಕ್ರೂರ ರೀತಿಯ ಕೊಲೆ ಆಗಿದ್ದು, ಆರೋಪಿಗಳು ಗುರುತು ಸಿಕ್ಕದಂತೆ ಶವವನ್ನು ತುಂಡುಗಳಾಗಿ ಕತ್ತರಿಸಿರುವುದು ಸ್ಪಷ್ಟವಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಹತ್ತಿರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಮೃತೆಯ ಗುರುತು ಪತ್ತೆಹಚ್ಚುವ ಮತ್ತು ಆರೋಪಿಗಳನ್ನು ಬಂಧಿಸುವ ನಿಟ್ಟಿನಲ್ಲಿ ಪೊಲೀಸರು ವ್ಯಾಪಕ ಶೋಧ ಕಾರ್ಯ ಆರಂಭಿಸಿದ್ದಾರೆ.