ಚಿಕ್ಕಮಗಳೂರು, ನ. 06 (DaijiworldNews/TA): ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಸೀಜ್ ಮಾಡಿದ್ದ ಕಾರಿನಲ್ಲಿ ಲಕ್ಷಾಂತರ ರೂಪಾಯಿ ನಗದು, ಚಿನ್ನ ಮತ್ತು ಬೆಳ್ಳಿ ಪತ್ತೆಯಾಗಿದ್ದು, ಪೊಲೀಸ್ ಇಲಾಖೆಯಲ್ಲೇ ಚರ್ಚೆಗೆ ಗ್ರಾಸವಾಗಿದೆ. ಕಳೆದ ಒಂದು ತಿಂಗಳಿಂದ ಪೊಲೀಸ್ ಠಾಣೆಯ ಆವರಣದಲ್ಲಿ ನಿಂತಿದ್ದ ಕಾರನ್ನು ಪರಿಶೀಲಿಸಿದಾಗ ಈ ಆಘಾತಕಾರಿ ಮಾಹಿತಿ ಹೊರಬಂದಿದೆ.

ಈ ಕಾರು ಮಾಜಿ ಶಿಕ್ಷಣ ಸಚಿವ ದಿ. ಗೋವಿಂದೇಗೌಡರ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟದ್ದು. ನೇಪಾಳಿ ಗ್ಯಾಂಗ್ ವಿರುದ್ಧ ನಡೆದ ತನಿಖೆಯಲ್ಲಿ ಸಾಂಗ್ಲಿ ಪೊಲೀಸರ ನೆರವಿನಿಂದ ಆರೋಪಿಗಳನ್ನು ಬಂಧಿಸಿದಾಗ, ಅವರು ಕಳ್ಳತನದ ಬಳಿಕ ಪರಾರಿಯಾಗಲು ಬಳಸಿದ್ದ ಕಾರನ್ನು ಕೊಪ್ಪ ಪೊಲೀಸರು ವಶಕ್ಕೆ ಪಡೆದಿದ್ದರು. ನ್ಯಾಯಾಲಯ ಇತ್ತೀಚೆಗೆ ಕಾರನ್ನು ಬಿಡುಗಡೆ ಮಾಡಲು ಆದೇಶಿಸಿದ ಹಿನ್ನೆಲೆ, ಕಾರು ಪರಿಶೀಲನೆಯ ವೇಳೆ ಅಡಗಿಸಿಟ್ಟಿದ್ದ ಚಿನ್ನ, ಬೆಳ್ಳಿ ಮತ್ತು ನಗದು ಪತ್ತೆಯಾಗಿದೆ.
ಪೊಲೀಸರು ಕಾರಿನ ಸೀಟ್ಗಳ ಅಡಿಯಲ್ಲಿ 595 ಗ್ರಾಂ ಚಿನ್ನ, 589 ಗ್ರಾಂ ಬೆಳ್ಳಿ ಹಾಗೂ ರೂ.3,41,150 ನಗದು ಪತ್ತೆಹಚ್ಚಿದ್ದಾರೆ. ಈ ವಸ್ತುಗಳ ಒಟ್ಟು ಮೌಲ್ಯ ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಆಶ್ಚರ್ಯಕರ ವಿಷಯವೆಂದರೆ, ಪತ್ತೆಯಾದ ಆಭರಣಗಳ ಪ್ರಮಾಣವು ಮೂಲ ಕಳ್ಳತನ ಪ್ರಕರಣದಲ್ಲಿ ವರದಿಯಾದ ಮೌಲ್ಯಕ್ಕಿಂತಲೂ ಹೆಚ್ಚು. ಇದರಿಂದ ಗ್ಯಾಂಗ್ ಇನ್ನೂ ಹಲವೆಡೆ ಕಳ್ಳತನಗಳಲ್ಲಿ ಕೈಚಳಕ ತೋರಿರಬಹುದು ಎಂಬ ಅನುಮಾನಗಳು ತಲೆದೋರಿವೆ.
ಈ ಘಟನೆಗೆ ಹಿನ್ನೆಲೆ ಆಗಸ್ಟ್ 21ರಂದು ಬೆಳಗಿನ ಜಾವ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಹರಂದೂರು ಗ್ರಾಮದ ಮಣಿಪುರ ಎಸ್ಟೇಟ್ನಲ್ಲಿ ಮಾಜಿ ಸಚಿವ ಗೋವಿಂದೇಗೌಡರ ಪುತ್ರ ಹೆಚ್.ಜಿ. ವೆಂಕಟೇಶ್ ಅವರ ಮನೆಯಲ್ಲಿ ನಡೆದ ಈ ಕೃತ್ಯದಲ್ಲಿ ಸುಮಾರು ರೂ6 ಲಕ್ಷ ನಗದು ಮತ್ತು ರೂ. 37.5 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಕಳವಾಗಿತ್ತು.
ಪ್ರಕರಣದ ತನಿಖೆಯಲ್ಲಿ ಪೊಲೀಸರು ಸಾಂಗ್ಲಿ ಪ್ರದೇಶದಲ್ಲಿ ಬಲೆ ಬೀಸಿ, ನೇಪಾಳದ **ರಾಜೇಂದ್ರ, ಏಕೇಂದ್ರ ಕುಟಲ್ ಬದ್ವಾಲ್ ಹಾಗೂ ಕರಂ ಸಿಂಗ್ ಬಹಾದ್ದೂರ್** ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಅವರಿಂದ ಒಟ್ಟು ಒಂದು ಕೋಟಿ ರೂಪಾಯಿಗಿಂತ ಅಧಿಕ ಮೌಲ್ಯದ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನು ವಶಕ್ಕೆ ಪಡೆದಿದ್ದರು.
ಈಗ ಪೊಲೀಸರ ಕಣ್ಣೆದುರೇ ನಿಂತಿದ್ದ ಕಾರಿನಿಂದಲೇ ಹೊಸ ಆಭರಣ ಮತ್ತು ನಗದು ಪತ್ತೆಯಾಗಿರುವುದರಿಂದ ತನಿಖೆಗೆ ಹೊಸ ತಿರುವು ದೊರೆತಿದೆ. ಪೊಲೀಸರು ಪತ್ತೆಯಾದ ವಸ್ತುಗಳ ಮೂಲವನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.