ಬಾಂಕಾ, ನ. 05 (DaijiworldNews/AA): ಬಿಹಾರ ವಿಧಾನಸಭೆಯ ಎರಡನೆಯ ಹಂತದ ಚುನಾವಣೆ ಇದೇ 11 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರು ಚುನಾವಣಾ ಪ್ರಚಾರವನ್ನು ಬಿರುಸುಗೊಳಿಸಿದ್ದಾರೆ.

ಬಾಂಕಾದಲ್ಲಿ ಸಾರ್ವಜನಿಕ ಸಭೆಯನ್ನುಶಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, "ಬಿಹಾರದಲ್ಲಿ ಎನ್ಡಿಎ ಸರ್ಕಾರ ಪ್ರಾಮಾಣಿಕತೆ, ಸೇವೆ ಮತ್ತು ಅಭಿವೃದ್ಧಿಯ ರಾಜಕೀಯವನ್ನು ಬಲಪಡಿಸಿದೆ. ಆದರೆ ಆರ್ಜೆಡಿ ತನ್ನ ಆಳ್ವಿಕೆಯಲ್ಲಿ ಭ್ರಷ್ಟಾಚಾರ ಮತ್ತು ಅಪರಾಧದಿಂದ ಬಿಹಾರದ ಪ್ರತಿಷ್ಠೆಯನ್ನು ಹಾಳು ಮಾಡಿದೆ. ಒಂದು ಕಡೆ ಎನ್ಡಿಎ ಸರ್ಕಾರದ ಅಭಿವೃದ್ಧಿ ಹೊಂದುತ್ತಿರುವ ಭಾರತ ಹಾಗೂ ಇನ್ನೊಂದೆಡೆ ಇಂಡಿ ಒಕ್ಕೂಟದ ಅಕ್ರಮ ನುಸುಳುವಿಕೆ ಭಾರತ, ಇವುಗಳ ಮಧ್ಯೆ ಸ್ಪರ್ಧೆ ನಡೆಯುತ್ತಿದ್ದು, ಮತದಾರರು ಜಾಗೃತೆಯಿಂದ ಮತ ಚಲಾಯಿಸಬೇಕಿದೆ" ಎಂದರು.
"ಬಿಹಾರ ಕೂಡ ಅಭಿವೃದ್ಧಿ ಹೊಂದಿದ ರಾಜ್ಯ ಆಗಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದೆ. ಬಿಹಾರದ ಅಭಿವೃದ್ಧಿಯಾದರೆ ವಿಕಸಿತ ಭಾರತದ ಕಲ್ಪನೆ ಸಾಕಾರಗೊಳ್ಳುತ್ತದೆ, ಈ ಹಿನ್ನೆಲೆಯಲ್ಲಿ ಬಿಹಾರದ ಅಭಿವೃದ್ಧಿಗೂ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯ ಬಿಹಾರದ ಜಿಡಿಪಿ ಬೆಳವಣಿಗೆ ದರವು ಶೇಕಡಾ 14 ಕ್ಕೆ ತಲುಪಿದ್ದು, ಆರ್ಥಿಕವಾಗಿ ದೇಶದ ಎರಡನೇ ಅತಿದೊಡ್ಡ ರಾಜ್ಯವಾಗಿದೆ" ಎಂದು ಹೇಳಿದರು.
"ಬಿಹಾರದ ಪೂರ್ವ ಚಂಪಾರಣ್ನ ಮಧುಬನ್ ಅಸೆಂಬ್ಲಿಯಲ್ಲಿ ಆಯೋಜಿಸಲಾದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕಳೆದ 11 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದಾಗಿ ಬಿಹಾರದಲ್ಲಿಯೂ ಅಗಾಧ ಪ್ರಗತಿಯಾಗಿದೆ. ವಿಕಸಿತ ಬಿಹಾರದ ಕಲ್ಪನೆಯನ್ನು ಸಾಕಾರಗೊಳಿಸುವ ಎನ್ಡಿಎ ನೇತೃತ್ವದ ಸರ್ಕಾರಕ್ಕೆ ಮಾತ್ರ ಸಾಧ್ಯ ಎಂದ ಸಚಿವ, ಬೇರೆ ಪಕ್ಷಗಳು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರವೆ ತಾಂಡವವಾಡುತ್ತದೆ" ಎಂದು ತಿಳಿಸಿದರು.
"ಲಾಲು ಪ್ರಸಾದ್ ಯಾದವ್ ಆಳ್ವಿಕೆಯಲ್ಲಿ ಬಿಹಾರದಲ್ಲಿ ಹಗರಣಗಳು ಹೆಚ್ಚಾಗಿದ್ದವು. ವೈದ್ಯರು, ಎಂಜಿನಿಯರ್ಗಳು ಮತ್ತು ವಕೀಲರು ಸಹ ರಾಜ್ಯದಿಂದ ಪಲಾಯನ ಮಾಡಿದ್ದರು. ಲಾಲು ಯಾದವ್, ರಾಬ್ರಿ ದೇವಿ ಮತ್ತು ತೇಜಸ್ವಿ ಯಾದವ್ ಎಲ್ಲರೂ ಹಗರಣಗಳಿಗೆ ಸಮಾನಾರ್ಥಕರಾಗಿದ್ದಾರೆ. ಮೇವು ಹಗರಣ, ಟಾರ್ ಹಗರಣ, ಭೂಮಿ ಹಗರಣದಿಂದ ಬಿಹಾರದ ಸ್ಥಿತಿ ಅತ್ಯಂತ ಹೀನಾಯವಾಗಿತ್ತು. ಆದರೆ ಬಿಹಾರದಲ್ಲಿ ಅಭಿವೃದ್ಧಿಯಾಗಬೇಕಿದ್ದರೆ, ಆರ್ಥಿಕವಾಗಿ ಪ್ರಗತಿ ಸಾಧಿಸಬೇಕಿದ್ದರೆ ಅದು ಎನ್ಡಿಎ ನೇತೃತ್ವದ ಸರ್ಕಾರದಿಂದ ಮಾತ್ರ ಸಾಧ್ಯ" ಎಂದರು.