ಬೆಂಗಳೂರು, ನ. 05 (DaijiworldNews/AA): ರಾಜ್ಯದ ಕಬ್ಬು ಬೆಳೆಗಾರರ ಬೇಡಿಕೆಯಂತೆ ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ನಿಗದಿಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಮಧ್ಯ ಪ್ರವೇಶಿಸಿ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದ ಕಬ್ಬು ಬೆಳೆಗಾರರು ನ್ಯಾಯ ಸಮ್ಮತ ಬೆಳೆ ನಿಗದಿಗೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದಾರೆ. ನಾನು ಸಹ ಈಗಾಗಲೇ ಪ್ರತಿಟನ್ ಕಬ್ಬಿಗೆ 3,500 ರೂಪಾಯಿ ದರ ನಿಗದಿಪಡಿಸುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದೇನೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ನಿರ್ಲಕ್ಷ್ಯ ಭಾವನೆ ಹೊಂದಿದ್ದು, ಅವರ ಸಮಸ್ಯೆಯನ್ನು ಪರಿಹರಿಸುವಲ್ಲಿ ವಿಫಲವಾಗಿದೆ" ಎಂದು ಹೇಳಿದರು.
"ಪ್ರತಿವರ್ಷವೂ ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆ ಹೆಚ್ಚಾಗುತ್ತಿದೆ. ಕೇಂದ್ರ ಸರ್ಕಾರ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ನಿಗದಿ ಮಾಡಿದ ನಂತರ ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಮತ್ತು ವಿದ್ಯುತ್ ಸೇರಿದಂತೆ ಇತರೆ ಉಪ ಉತ್ಪನ್ನಗಳನ್ನು ತಯಾರಿಸುತ್ತಿವೆ. ಹೀಗಾಗಿ ರೈತರು ಕೇಳುವ ದರವನ್ನು ನೀಡಲು ಸಾಧ್ಯವಿದೆ. ಹಾಗಾಗಿ ರಾಜ್ಯ ಸರ್ಕಾರ ಶೀಘ್ರವೇ ಕಾನೂನು ಪ್ರಕಾರವೇ ಕಬ್ಬಿನ ದರವನ್ನು ರೈತರ ಬೇಡಿಕೆಗೆ ತಕ್ಕಂತೆ ನಿಗದಿಪಡಿಸಬೇಕು" ಎಂದು ತಿಳಿಸಿದರು.