ಗುಜರಾತ್, ನ. 05(DaijiworldNews/TA): ಹಣದಲ್ಲಿ ಶ್ರೀಮಂತರಾಗುವುದು ಸುಲಭ, ಆದರೆ ಮನಸ್ಸಿನಲ್ಲಿ ಶ್ರೀಮಂತರಾಗುವುದು ಅಪರೂಪ. ಇಂತಹ ಅಪರೂಪದ ಮನಸ್ಸಿನವರು ಗುಜರಾತ್ನ ಅಮ್ರೇಲಿ ಜಿಲ್ಲೆಯ ಉದ್ಯಮಿ ಬಾಬುಭಾಯ್ ಜೀರಾವಾಲ. ತಮ್ಮ ಸ್ವರ್ಗಸ್ಥ ತಾಯಿಯ ಕನಸನ್ನು ಸಾಕಾರಗೊಳಿಸಲು ಅವರು ತಮ್ಮ ಊರಿನ ಜನರ ಸಾಲವನ್ನು ತೀರಿಸಿ ಅನೇಕ ರೈತರ ಜೀವನದಲ್ಲಿ ಬೆಳಕು ತುಂಬಿದ್ದಾರೆ. ಸವರಕುಂಡ್ಲ ತಾಲ್ಲೂಕಿನ ಜೀರಾ ಗ್ರಾಮದ ಬಾಬುಭಾಯ್ ಅವರು ತಮ್ಮ ಊರಿನ 299 ರೈತರ ಬ್ಯಾಂಕ್ ಸಾಲವನ್ನು ಒಮ್ಮೆಯೇ ತೀರಿಸಿ ಅವರನ್ನು ಸಂಪೂರ್ಣವಾಗಿ ಋಣಮುಕ್ತರನ್ನಾಗಿಸಿದ್ದಾರೆ.

ಜೀರಾ ಸೇವಾ ಸಹಕಾರಿ ಮಂಡಲ ಬ್ಯಾಂಕ್ನಲ್ಲಿ ಈ ರೈತರ ಹೆಸರಿನಲ್ಲಿ ಒಟ್ಟು ರೂ. 89.89 ಲಕ್ಷ ಸಾಲ ಬಾಕಿಯಿತ್ತು. ಕಳೆದ ಮೂವತ್ತೇಳು ವರ್ಷಗಳಿಂದ ಈ ಸಾಲದ ವ್ಯಾಜ್ಯ ನಡೆಯುತ್ತಿತ್ತು. ತೊಂಬತ್ತರ ದಶಕದಲ್ಲಿ ಬ್ಯಾಂಕ್ನ ಕೆಲವು ಅಧಿಕಾರಿಗಳು ರೈತರ ಹೆಸರಿನಲ್ಲಿ ನಕಲಿ ಸಾಲ ಪಡೆದುಕೊಂಡು ಮೋಸ ಮಾಡಿದ್ದರು. ಅದರ ಪರಿಣಾಮವಾಗಿ ನಿಷ್ಕಪಟ ರೈತರು ತಮ್ಮದಲ್ಲದ ಸಾಲದ ಹೊರೆ ಹೊತ್ತು ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಸಾಲದ ಕಾರಣದಿಂದಾಗಿ ಅವರಿಗೆ ಹೊಸ ಸಾಲಗಳು ದೊರೆಯುತ್ತಿರಲಿಲ್ಲ, ಸರ್ಕಾರದ ಯೋಜನೆಗಳಿಂದಲೂ ವಂಚಿತರಾಗಿದ್ದರು, ಅವರ ಜಮೀನು ಪತ್ರಗಳು ಬ್ಯಾಂಕ್ ಸುಪರ್ದಿಯಲ್ಲೇ ಉಳಿದುಕೊಂಡಿದ್ದವು.
ತಮ್ಮ ಊರಿನ ಜನರು ಈ ರೀತಿಯ ಸಂಕಷ್ಟದಲ್ಲಿ ಬದುಕುತ್ತಿರುವುದನ್ನು ಕಂಡು ಬಾಬುಭಾಯ್ ಜೀರಾವಾಲ ಅವರ ತಾಯಿ ತುಂಬಾ ಬೇಸರಪಟ್ಟು, ತಮ್ಮ ಬಳಿಯಿರುವ ಒಡವೆಗಳನ್ನು ಮಾರಿಯಾದರೂ ಊರಿನವರ ಸಾಲ ತೀರಿಸಬೇಕು ಎಂದು ಬಯಸಿದ್ದರು. ಆದರೆ ಆ ಆಸೆ ಪೂರ್ತಿಯಾಗುವ ಮುನ್ನವೇ ಅವರು ಸ್ವರ್ಗಸ್ಥರಾದರು. ತಾಯಿಯ ಆ ಕನಸನ್ನು ನೆರವೇರಿಸಲು ಬಾಬುಭಾಯ್ ಅವರು ಮುಂದಾಗಿದ್ದು, ಅವರ ಪುಣ್ಯತಿಥಿಯಂದೇ ಬ್ಯಾಂಕ್ಗೆ ಸಂಪೂರ್ಣ ಸಾಲದ ಮೊತ್ತವನ್ನು ಪಾವತಿಸಿ ರೈತರಿಗೆ ಹೊಸ ಜೀವನ ನೀಡಿದರು.
ಸಾಲ ತೀರಿಸಿದ ಬಳಿಕ ರೈತರಿಗೆ ಬ್ಯಾಂಕ್ನಿಂದ ಋಣಮುಕ್ತ ಪ್ರಮಾಣಪತ್ರ ದೊರೆತಿದ್ದು, ಅವರ ಮುಖಗಳಲ್ಲಿ ಸಂತೋಷದ ನಗು ಮೂಡಿದೆ. ಮೂರು ದಶಕಗಳಿಂದ ಸಾಲದ ಬಾಧೆಯಿಂದ ನರಳುತ್ತಿದ್ದ 299 ರೈತ ಕುಟುಂಬಗಳು ಈಗ ಹೊಸ ಭರವಸೆಯೊಂದಿಗೆ ಜೀವನ ಮುಂದುವರಿಸುತ್ತಿವೆ. ಬಾಬುಭಾಯ್ ಅವರ ದಾನಶೀಲ ಕೃತ್ಯವನ್ನು ಊರಿನ ಜನರು ಹಾಗೂ ಸಾಮಾಜಿಕ ವಲಯಗಳು ಪ್ರಶಂಸಿಸುತ್ತಿದ್ದು, “ತಾಯಿಯಂತೆಯೇ ಹೃದಯವಂತರಾಗಿರುವ ಮಗನ ಮಾನವೀಯತೆ ಎಲ್ಲರಿಗೂ ಮಾದರಿಯಾಗಿದೆ” ಎಂದು ಕೊಂಡಾಡುತ್ತಿದ್ದಾರೆ.