ಬೆಳಗಾವಿ, ನ. 04(DaijiworldNews/AK): ರಾಜ್ಯ ಸರಕಾರವು ರೈತರನ್ನು ಕಡೆಗಣಿಸಿ ಉಳಿಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಎಚ್ಚರಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್ ನಲ್ಲಿ ನಡೆಯುತ್ತಿರುವ ಆಹೋರಾತ್ರಿ ಹೋರಾಟದಲ್ಲಿ ಇಂದು ಭಾಗವಹಿಸಿದ್ದ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಭಟನೆಯ ಕಿಚ್ಚು ಹೆಚ್ಚಾಗುತ್ತಿದೆ. ಇವತ್ತು ಗೋಕಾಕದಲ್ಲಿ ಪ್ರತಿಭಟನೆ ಆರಂಭವಾಗಿದೆ. ಚಿಕ್ಕೋಡಿ, ಬೈಲಹೊಂಗಲದಲ್ಲೂ ಹೋರಾಟ ಶುರುವಾಗಿದೆ ಎಂದು ಗಮನ ಸೆಳೆದರು.ಇನ್ನೂ ಕೂಡ ರಾಜ್ಯ ಸರಕಾರವು ಕಬ್ಬು ಬೆಳೆಗಾರರ ಬಗ್ಗೆ ನಿರ್ಲಕ್ಷ್ಯ ತೋರಿದರೆ ಆ ಭಗವಂತ ಬಂದರೂ ನಿಮ್ಮ ಸರಕಾರವನ್ನು ರಕ್ಷಿಸಲು ಸಾಧ್ಯವಾಗದು ಎಂದು ನುಡಿದರು.
ಕಬ್ಬು ಬೆಳೆಗಾರರ ನಿರ್ಲಕ್ಷ್ಯ ಮಾಡದಿರಿ ಎಂದು ಮುಖ್ಯಮಂತ್ರಿಗಳಲ್ಲಿ ವಿನಂತಿಸುವುದಾಗಿ ತಿಳಿಸಿದರು. ಇನ್ನೂ ಬೆಂಗಳೂರಿನಲ್ಲಿ ಕಣ್ಮುಚ್ಚಿ ಕೂತಿದ್ದರೆ, ಈ ಜ್ವಾಲೆ ಬೆಂಗಳೂರು ವಿಧಾನಸೌಧವನ್ನೂ ಸುಡಬಹುದು ಎಂದು ಹೇಳಿದರು. ರಾಜ್ಯ ಸರಕಾರವು ಇವತ್ತು ಅಥವಾ ನಾಳೆಯೇ ರೈತ ಮುಖಂಡರನ್ನು ಕೂರಿಸಿ; ಒಂದು ವೇದಿಕೆ ನಿರ್ಮಿಸಿ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.
ರೈತ ವಿಷ ತೆಗೆದುಕೊಂಡ ವಿಚಾರ ತಿಳಿದು ಮನಸ್ಸು ತಡೆಯಲಿಲ್ಲ; ಮುಗ್ಧ ರೈತರ ಸಂಕಷ್ಟ ತಿಳಿದು ಮನಸ್ಸು ಕರಗಿಹೋಗಿದೆ. ಸಚಿವರ ಜೊತೆಗೆ ಮಾತನಾಡಿದ್ದೇನೆ ಎಂದ ಅವರು, ನಾಡಿಗೆ ಅನ್ನ ನೀಡುವ ರೈತರಿಗೆ ನ್ಯಾಯ ಕೊಡಲಾಗದ ಸರಕಾರ ಬದುಕಿದ್ದೂ ಸತ್ತಂತೆ ಎಂದು ಅವರು ತಿಳಿಸಿದರು.
ನಾನು ರಾಜಕಾರಣ ಮಾಡುತ್ತಿಲ್ಲ; ರೈತರು ಇವತ್ತು ಕಂಗಾಲಾಗಿದ್ದಾರೆ. ಕಬ್ಬು ಬೆಳೆಗಾರರು ಕೇಳುತ್ತಿರುವುದು ಭಿಕ್ಷೆಯಲ್ಲ; ನ್ಯಾಯಸಮ್ಮತ ಬೇಡಿಕೆಯನ್ನು ಅವರು ಕೇಳುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಜವಾಬ್ದಾರಿ ಇದ್ದಲ್ಲಿ, ರಾಜ್ಯ ಸರಕಾರಕ್ಕೆ ಕಿಂಚಿತ್ತಾದರೂ ಮನುಷ್ಯತ್ವ ಇದ್ದರೆ, ತಕ್ಷಣ ಸಭೆ ಕರೆದು ರೈತರ ಸಂಕಷ್ಟಕ್ಕೆ ಪರಿಹಾರ ನೀಡಬೇಕೆಂದು ಅವರು ಆಗ್ರಹಿಸಿದರು.