ಬೆಂಗಳೂರು, ನ. 04 (DaijiworldNews/AA): ಇದೇ ನವೆಂಬರ್ 6 ಹಾಗೂ 11ರಂದು ಎರಡು ಹಂತದಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆ ಬಿಹಾರಿಗಳು ತಮ್ಮ ರಾಜ್ಯಕ್ಕೆ ಹೋಗಿ ಮತದಾನ ಮಾಡಿಬರಲು ಮೂರು ದಿನ ರಜೆ ನೀಡಬೇಕೆಂದು ಆಯಾ ಸಂಸ್ಥೆ, ಕಂಪನಿಗಳಿಗೆ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "2025ರ ನವೆಂಬರ್ 6 ಮತ್ತು 11 ರಂದು ನಡೆಯಲಿರುವ ಬಿಹಾರ ರಾಜ್ಯದ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ, ಬೆಂಗಳೂರು ಮತ್ತು ಕರ್ನಾಟಕದಾದ್ಯಂತ ಕೆಲಸ ಮಾಡುತ್ತಿರುವ ಬಿಹಾರದ ಮತದಾರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಎಲ್ಲಾ ಕಂಪನಿಗಳು, ಉದ್ಯಮಿದಾರರು, ಹೋಟೆಲ್ಗಳು ಮತ್ತು ಗುತ್ತಿಗೆದಾರರು ಕನಿಷ್ಠ ಮೂರು ದಿನಗಳ ವೇತನ ಸಹಿತ ರಜೆ ನೀಡಬೇಕು. ಈ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಹಕರಿಸಬೇಕೆಂದು" ಕೇಳಿಕೊಂಡಿದ್ದಾರೆ.
ಬಿಹಾರ ವಿಧಾನಸಭೆ 243 ಸ್ಥಾಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆಯು ಕಾಂಗ್ರೆಸ್ಗೆ ಮಹತ್ವದ್ದಾಗಿದ್ದು, ಕರ್ನಾಟಕದ ಪ್ರಮುಖ ರಾಜಕಾರಣಿಗಳು ಸಹ ಬಿಹಾರದ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ಅದರಂತೆ ಬೆಂಗಳೂರಿನಲ್ಲಿರುವ ಕೆಲಸ ಮಾಡಿಕೊಂಡಿರುವ ಬಿಹಾರಿಗಳನ್ನು ಡಿಸಿಎಂ ಡಿಕೆ ಶಿವಕುಮಾರ್ ಮತಯಾಚನೆ ಮಾಡಿದ್ದಾರೆ.