ಬೆಂಗಳೂರು, ನ. 04 (DaijiworldNews/TA): ಟ್ರಾಫಿಕ್ ಸಮಸ್ಯೆ ಎಂದರೆ ಬೆಂಗಳೂರಿಗರಿಗೆ ಹೊಸದಲ್ಲ. ದಿನದ ಹಲವು ಗಂಟೆಗಳ ಕಾಲ ಸಿಗ್ನಲ್ಗಳ ಬಳಿ ಸಿಲುಕಿಕೊಂಡು ಪ್ರಯಾಣಿಸುವ ಜನರು ಆಗಾಗ್ಗೆ ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಆದರೆ ಈ ಬಾರಿ ನಗರದಲ್ಲಿ ಟ್ರಾಫಿಕ್ ಸಮಸ್ಯೆಯ ಮಧ್ಯೆ ಒಂದು ವಿಶಿಷ್ಟ ಸಿಗ್ನಲ್ ಎಲ್ಲರ ಗಮನ ಸೆಳೆದಿದೆ. ಅದು ‘ಹೃದಯಾಕಾರದ ಕೆಂಪು ಸಿಗ್ನಲ್’.

ನಗರದ ನಿವಾಸಿಯೊಬ್ಬರು ಈ ವಿಶಿಷ್ಟ ಸಿಗ್ನಲ್ನ ಚಿತ್ರವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಬೆಂಗಳೂರಿನಲ್ಲಿ ಈ ಹೃದಯ ಆಕಾರದ ಸಿಗ್ನಲ್ಗಳನ್ನು ನೋಡಿದ್ದೀರಾ? ನಗರವನ್ನು ಇನ್ನಷ್ಟು ಜೀವಂತವಾಗಿಸಲು ಇದು ಒಳ್ಳೆಯ ಪ್ರಯತ್ನ” ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಟ್ರಾಫಿಕ್ನಲ್ಲಿ ಗಂಟೆಗಟ್ಟಲೆ ಕಳೆಯುವ ಪ್ರಯಾಣಿಕರಲ್ಲಿ ಕುತೂಹಲ ಮೂಡಿಸಿದೆ.
ಸಾಮಾಜಿಕ ಜಾಲತಾಣ ಬಳಕೆದಾರರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಒಬ್ಬರು, “ದಿನದ ಬಹುಪಾಲು ಸಮಯ ಸಿಗ್ನಲ್ಗಳಲ್ಲಿಯೇ ಕಳೆಯುವುದರಿಂದ ಇದು ತುಂಬಾ ಅರ್ಥಪೂರ್ಣವಾಗಿದೆ,” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ಒಂದು ವರ್ಷದ ಹಿಂದೆ ನಾನು ಇದನ್ನು ಮೊದಲು ನೋಡಿದಾಗ, ನಿಜವಾಗಿಯೇ ಕಣ್ಣಿಗೆ ಭ್ರಾಂತಿ ಆಗಿದೆ ಎಂದುಕೊಂಡಿದ್ದೆ,” ಎಂದು ಹಾಸ್ಯ ಮಾಡಿದ್ದಾರೆ.
ಈ ನಡುವೆ, ಬೆಂಗಳೂರು ನಗರದಲ್ಲಿ ಸ್ಮಾರ್ಟ್ ಸಿಗ್ನಲ್ ವ್ಯವಸ್ಥೆಗಳನ್ನು ಹಂತಹಂತವಾಗಿ ಅಳವಡಿಸಲಾಗುತ್ತಿದ್ದು, ಸಂಚಾರ ನಿರ್ವಹಣೆಯನ್ನು ಸುಧಾರಿಸುವ ಜೊತೆಗೆ ನೈಜ-ಸಮಯದ ಸಿಗ್ನಲ್ ಕೌಂಟ್ಡೌನ್ಗಳನ್ನು ಕೂಡ ನೋಡಲು ಅವಕಾಶ ಕಲ್ಪಿಸಲಾಗಿದೆ. ನಗರವನ್ನು ಹೆಚ್ಚು ಆಕರ್ಷಕವಾಗಿ ಮತ್ತು ಸಂಚಾರ ಸ್ನೇಹಿಯಾಗಿ ರೂಪಿಸುವ ಭಾಗವಾಗಿ ‘ಹೃದಯ ಸಿಗ್ನಲ್’ ಒಂದು ಚಿಕ್ಕ, ಆದರೆ ಅರ್ಥಪೂರ್ಣ ಪ್ರಯೋಗವೆಂದೇ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸಿಸಲಾಗುತ್ತಿದೆ.