ಬೀದರ್, ನ. 04 (DaijiworldNews/TA): ಬೀದರ್ ನಗರದಲ್ಲಿನ ನೌಬಾದ್ ಪ್ರದೇಶದ ಕಲಬುರ್ಗಿ - ಬೀದರ್ ರೈಲ್ವೆ ಮಾರ್ಗದಲ್ಲಿ ಭಾರೀ ದುರಂತ ತಪ್ಪಿದ ಘಟನೆ ನಡೆದಿದೆ. ರೈಲು ಬರುವ ಕ್ಷಣದಲ್ಲಿ ಬೈಕ್ ಸವಾರನೊಬ್ಬ ಹಳಿಯ ಮೇಲೆಯೇ ಬೈಕ್ ಬಿಟ್ಟು ಓಡಿ ಹೋಗಿದ್ದು, ರೈಲು ಚಾಲಕನ ತುರ್ತು ಸ್ಪಂದನೆಯಿಂದ ದೊಡ್ಡ ದುರಂತ ತಪ್ಪಿದೆ.

ಮಾಹಿತಿ ಪ್ರಕಾರ, ಜಮೀನಿಗೆ ತೆರಳುತ್ತಿದ್ದ ಬೈಕ್ ಸವಾರನು ರೈಲ್ವೆ ಹಳಿ ದಾಟಲು ಪ್ರಯತ್ನಿಸಿದಾಗ ದೂರದಿಂದ ರೈಲು ಬರುತ್ತಿರುವುದು ಗಮನಕ್ಕೆ ಬಂದಂತೆ ಆತ ಗಾಬರಿಗೊಂಡು, ಬೈಕ್ ರೈಲ್ವೆ ಹಳಿಯ ಮೇಲೆಯೇ ಬಿಟ್ಟು ಪಾರಾಗಿದ್ದಾನೆ. ಈ ದೃಶ್ಯವನ್ನು ರೈಲು ಚಾಲಕ ದೂರದಿಂದಲೇ ಗಮನಿಸಿ ತಕ್ಷಣ ರೈಲು ನಿಲ್ಲಿಸಲು ಯತ್ನಿಸಿದ್ದರೂ, ರೈಲು ಸಂಪೂರ್ಣ ನಿಲ್ಲದೆ ಬೈಕ್ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್, ರೈಲು ಹಳಿ ತಪ್ಪದೆ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ರೈಲು ಚಾಲಕನ ತಕ್ಷಣದ ಕ್ರಮದಿಂದ ಭಾರೀ ಅನಾಹುತ ತಪ್ಪಿದರೂ, ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಸಾರ್ವಜನಿಕರು ಜಾಗ್ರತೆ ವಹಿಸಬೇಕೆಂದು ರೈಲ್ವೆ ಅಧಿಕಾರಿಗಳು ಮನವಿ ಮಾಡಿದ್ದಾರೆ.