ಕಲಬುರ್ಗಿ, ನ. 04 (DaijiworldNews/TA): ಆರ್ಎಸ್ಎಸ್ ವಿರುದ್ಧ ವ್ಯಂಗ್ಯವಾಡುವ ಹೇಳಿಕೆಗಳಿಂದ ಚರ್ಚೆಗೆ ಗ್ರಾಸವಾಗಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ, ಬಿಜೆಪಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಿಡಿ ಕಾರಿದ್ದಾರೆ. ಕಲಬುರ್ಗಿ ಅಭಿವೃದ್ಧಿ ವಿಷಯದಲ್ಲಿ ಪ್ರಶ್ನೆ ಎತ್ತಿ, ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟಾಂಗ್ ನೀಡಿದ್ದಾರೆ.

ತಮ್ಮ ಎಕ್ಸ್ (ಹಳೆಯ ಟ್ವಿಟರ್) ಖಾತೆಯಲ್ಲಿ ಆರ್. ಅಶೋಕ್ ಬರೆದುಕೊಂಡಿರುವಂತೆ, ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರೇ, ಕಲ್ಯಾಣ ಕರ್ನಾಟಕದ 38 ಗ್ರಾಮಗಳ ಮಹಿಳೆಯರು ಶಕ್ತಿ ಯೋಜನೆಯಿಂದ ಯಾವುದೇ ಪ್ರಯೋಜನ ಪಡೆಯುತ್ತಿಲ್ಲ. ಕಾರಣ ಆ ಗ್ರಾಮಗಳಿಗೆ ಬಸ್ ಸೇವೆಯೇ ಇಲ್ಲ. ಬಸ್ ಓಡದಿರುವುದಕ್ಕೆ ಪ್ರಮುಖ ಕಾರಣ ಅಂದರೆ ಅಲ್ಲಿ ರಸ್ತೆ ಸೌಲಭ್ಯವೇ ಇಲ್ಲ ಎಂದು ಅಶೋಕ್ ಆರೋಪಿಸಿದ್ದಾರೆ.
ಅವರು ಮುಂದುವರಿದು, “ವಿದೇಶಾಂಗ ನೀತಿಯಿಂದ ಹಿಡಿದು ಮಿಲಿಟರಿ ತಂತ್ರಗಾರಿಕೆವರೆಗೆ ಎಲ್ಲದರ ಮೇಲೂ ಉದ್ದುದ್ದ ಬೊಗಳೆ ಭಾಷಣ ಮಾಡುವ ತಮಗೆ, ಕಲ್ಯಾಣ ಕರ್ನಾಟಕದ ಹಳ್ಳಿಗಳ ಜನರು ಬಸ್ಸಿಲ್ಲದೆ ದುಪ್ಪಟ್ಟು ಬೆಲೆ ಕೊಟ್ಟು ತಮ್ಮ ಸ್ವಂತ ಗಾಡಿ, ಟಂಟಂ ಅಥವಾ ಜೀಪಿನಲ್ಲಿ ಪ್ರಯಾಣ ಮಾಡುತ್ತಿರುವುದು ಕಾಣುವುದಿಲ್ಲವೇ, ಪ್ರಿಯಾಂಕ್ ಖರ್ಗೆ ಅವರೇ?” ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
ಪ್ರಿಯಾಂಕ್ ಖರ್ಗೆಯ ಕುಟುಂಬದ ವಿರುದ್ಧವೂ ಅಶೋಕ್ ವಾಗ್ದಾಳಿ ನಡೆಸಿದ್ದು, “ಕಲ್ಯಾಣ ಕರ್ನಾಟಕದ ಜನರ ಮತ ಪಡೆದು ಅಧಿಕಾರವನ್ನು ಅನುಭವಿಸಿ, ತಮ್ಮ ಕುಟುಂಬದ ಕಲ್ಯಾಣ ಮಾಡಿಕೊಳ್ಳುವುದೇ ನಿಮ್ಮ ಏಕೈಕ ಸಾಧನೆ. ಆರ್ಎಸ್ಎಸ್ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ನಿಮ್ಮ ವೈಫಲ್ಯ ಮರೆಮಾಚಲು ಪ್ರಯತ್ನಿಸಬೇಡಿ. ಜನರನ್ನು ಮೋಸಗೊಳಿಸುವ ದಿನಗಳು ಮುಗಿಯುತ್ತಿವೆ. ಕಲ್ಯಾಣ ಕರ್ನಾಟಕದ ಜನ ಖರ್ಗೆ ಕುಟುಂಬವನ್ನೂ, ಕಾಂಗ್ರೆಸ್ ಪಕ್ಷವನ್ನೂ ತಿರಸ್ಕರಿಸುವ ದಿನ ದೂರದಲ್ಲಿಲ್ಲ,” ಎಂದು ಅಶೋಕ್ ತಮ್ಮ ಪೋಸ್ಟ್ನಲ್ಲಿ ಎಚ್ಚರಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಬಿಜೆಪಿ ನಾಯಕರು ಇತ್ತೀಚೆಗೆ ಆಗಾಗ್ಗೆ ಟೀಕೆಗಳನ್ನು ಮಾಡುತ್ತಿದ್ದು, ಈ ಹೊಸ ಟಾಂಗ್ ರಾಜಕೀಯ ವಲಯದಲ್ಲಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.