ಬೆಳಗಾವಿ, ನ. 04 (DaijiworldNews/TA): ರಾಜ್ಯದಲ್ಲಿ ಬಿಜೆಪಿ ದುರ್ಬಲವಾಗಲು ಬಿ.ವೈ. ವಿಜಯೇಂದ್ರ ಅವರೇ ಕಾರಣ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಆರೋಪಿಸಿದ್ದಾರೆ. ಪಕ್ಷದ ಒಳ ಕಳಕಳಿ ಮತ್ತು ನಾಯಕತ್ವದ ಕುರಿತು ತಮ್ಮ ಅಸಮಾಧಾನವನ್ನು ಸ್ಪಷ್ಟಪಡಿಸಿದ ಅವರು, “ವಿಜಯೇಂದ್ರನಿಂದಲೇ ಬಿಜೆಪಿ ಹಾಳಾಗುತ್ತಿದೆ, ಇದರಿಂದ ನಮಗೂ ನೋವಾಗಿದೆ,” ಎಂದು ಖಂಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ ಜಾರಕಿಹೊಳಿ, “ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ನಾವು ಎಂದಿಗೂ ಮಾತನಾಡಿಲ್ಲ. ಆದರೆ ಅವರ ಪುತ್ರ ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿದ್ದೇವೆ. ಅವರ ಬದಲಾವಣೆಯ ಹೋರಾಟದ ಬಗ್ಗೆ ಮಾಧ್ಯಮದ ಮುಂದೆ ಚರ್ಚೆ ಮಾಡುವ ಉದ್ದೇಶ ಇಲ್ಲ,” ಎಂದು ಸ್ಪಷ್ಟಪಡಿಸಿದರು.
ಯತ್ನಾಳ್ ಉಚ್ಚಾಟನೆಯ ಬಳಿಕ ಪಕ್ಷದೊಳಗಿನ ಅಸಮಾಧಾನ ಹೆಚ್ಚಾಗಿರುವುದನ್ನು ಉಲ್ಲೇಖಿಸಿದ ಅವರು, “ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ವಜಾ ಮಾಡಿ ಎಂಟು ತಿಂಗಳು ಕಳೆದಿವೆ. ಯತ್ನಾಳ ಇಂದು ರಾಜ್ಯ ರಾಜಕಾರಣದಲ್ಲಿ ಹೆಚ್ಚು ಪ್ರಭಾವಿ ನಾಯಕರಾಗಿದ್ದಾರೆ, ಆದರೆ ವಿಜಯೇಂದ್ರ ಕೆಳಗೆ ಬಂದಿದ್ದಾರೆ. ಈ ವ್ಯತ್ಯಾಸವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಬೇಕು. ವಿಜಯೇಂದ್ರ ಮುಂದುವರಿದರೆ ಯತ್ನಾಳ ಹೊಸ ಪಕ್ಷ ಕಟ್ಟುವ ಸಾಧ್ಯತೆ ಇದೆ,” ಎಂದು ಎಚ್ಚರಿಸಿದರು.
ಜಾರಕಿಹೊಳಿ ಮುಂದುವರಿದು, “ಯತ್ನಾಳ ಅವರನ್ನು ಬಿಜೆಪಿ ಕಳೆದುಕೊಳ್ಳಬಾರದು. ನಾನು ವಾರಕ್ಕೊಮ್ಮೆ ಅವರೊಂದಿಗೆ ಭೇಟಿಯಾಗುತ್ತೇನೆ. ಆರಂಭದಿಂದಲೂ ಅವರನ್ನು ಮತ್ತೆ ಪಕ್ಷಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ. ಬಿಹಾರ ಚುನಾವಣೆ ಮತ್ತು ಆರ್ಎಸ್ಎಸ್ ಶತಮಾನೋತ್ಸವ ಕಾರ್ಯಕ್ರಮಗಳ ಕಾರಣ ಹೈಕಮಾಂಡ್ ನಾಯಕರು ಬ್ಯುಸಿಯಾಗಿದ್ದಾರೆ. ಆದರೂ ಯತ್ನಾಳ ವಾಪಸಿಗಾಗಿ ನಮ್ಮ ಪ್ರಯತ್ನ ಮುಂದುವರಿದಿದೆ,” ಎಂದು ಹೇಳಿದರು.
ರೈತರ ಪರ ಧ್ವನಿ ಎತ್ತಿದ ಜಾರಕಿಹೊಳಿ, “ಸರ್ಕಾರ ತಕ್ಷಣ ಕಬ್ಬಿಗೆ ಬೆಂಬಲ ಬೆಲೆ ಘೋಷಿಸಬೇಕು. ರೈತರಿಗೆ ನ್ಯಾಯ ಸಿಗಬೇಕು, ಇದು ನಮ್ಮ ಪಕ್ಷದ ನಿಲುವು,” ಎಂದು ಆಗ್ರಹಿಸಿದರು.
ಕಾಂಗ್ರೆಸ್ ನಾಯಕರ ಕುರಿತಾಗಿ ಮಾತನಾಡಿದ ಅವರು, “ನವೆಂಬರ್ ಕ್ರಾಂತಿಯ ಬಗ್ಗೆ ನಮ್ಮ ಪಕ್ಷದವರು ಚರ್ಚೆ ಮಾಡುತ್ತಿರುವುದು ನನಗೆ ಅರ್ಥವಾಗುತ್ತಿಲ್ಲ. ಡಿ.ಕೆ. ಶಿವಕುಮಾರ್ ಸಿಎಂ ಆಗಲಿ ಅಥವಾ ಸಿದ್ದರಾಮಯ್ಯ ಮುಂದುವರಿಯಲಿ, ನಮಗೆ ಅದರೊಂದಿಗೆ ಸಂಬಂಧ ಇಲ್ಲ. ನಾವು ವಿರೋಧ ಪಕ್ಷವಾಗಿ ಕೆಲಸ ಮಾಡಿದರೆ ಸಾಕು,” ಎಂದರು.