ಚಂಡೀಗಢ, ನ. 04 (DaijiworldNews/AA): 17 ವರ್ಷದ ಬಾಲಕಿಯನ್ನು ಹಲವಾರು ದಿನಗಳಿಂದ ಹಿಂಬಾಲಿಸಿ ನಿತ್ಯ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊರ್ವ ಆಕೆಯ ಮೇಲೆ ಗುಂಡು ಹಾರಿಸಿದ ಘಟನೆ ಫರಿದಾಬಾದ್ನಲ್ಲಿ ನಡೆದಿದೆ.

ಬಾಲಕಿ ಮತ್ತು ಆರೋಪಿ ಇಬ್ಬರೂ ಒಂದೇ ಲೈಬ್ರರಿಯಲ್ಲಿ ಓದಲು ಬರುತ್ತಿದ್ದರು. ಈ ಘಟನೆಯು ಗ್ರಂಥಾಲಯದ ಹೊರಗೆ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆರೋಪಿಗೆ ಹುಡುಗಿಯ ದಿನಚರಿಯ ಬಗ್ಗೆ ತಿಳಿದಿತ್ತು. ಅವಳು ಬರುವುದಕ್ಕಿಂತ ಮುಂಚಿತವಾಗಿಯೇ ಬಂದು ಕಾಯುತ್ತಿದ್ದ. ಆರೋಪಿಯು ಹುಡುಗಿಯ ಚಲನವಲನಗಳನ್ನು ಗಮನಿಸುತ್ತಿದ್ದ. ಆಕೆ ಗ್ರಂಥಾಲಯಕ್ಕೆ ಬರುವುದನ್ನೇ ಕಾದು ಕುಳಿತುಕೊಳ್ಳುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಾಳು ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಯನ್ನು ಗುರುತಿಸಿದ್ದಾಳೆ. ಆತ ಹಲವು ಬಾರಿ ಕಿರುಕುಳ ನೀಡುತ್ತಿದ್ದ. ಆರೋಪಿ ನನಗೆ ಗೊತ್ತು. ಆತ ಬಹಳ ಸಮಯದಿಂದ ನನಗೆ ತೊಂದರೆ ನೀಡುತ್ತಿದ್ದ ಎಂದು ಪೊಲೀಸರಿಗೆ ತಿಳಿಸಿದ್ದಾಳೆ.
ಬಾಲಕಿಯ ಮೇಲೆ ಗುಂಡು ಹಾರಿಸಿದ ನಂತರ, ಆರೋಪಿಯು ಪಿಸ್ತೂಲನ್ನು ಸ್ಥಳದಲ್ಲೇ ಎಸೆದು ಪರಾರಿಯಾಗಿದ್ದಾನೆ. ಪೊಲೀಸರು ಪಿಸ್ತೂಲನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ವಕ್ತಾರರು ಮಾಹಿತಿ ನೀಡಿದ್ದಾರೆ.