ಬೆಂಗಳೂರು, ನ. 03 (DaijiworldNews/AK):ಪ್ರಾದೇಶಿಕ ವೈಮಾನಿಕ ಕಂಪನಿಯಾದ ಸ್ಟಾರ್ ಏರ್ ಇದೀಗ ಕರ್ನಾಟಕದಲ್ಲಿ ತನ್ನ ಸಂಪರ್ಕ ಜಾಲ ಹೆಚ್ಚಿಸಿದೆ.

ಬೆಂಗಳೂರಿನಿಂದ ವಿಜಯನಗರಕ್ಕೆ ಫ್ಲೈಟ್ ಸೇವೆ ಆರಂಭಿಸಿದೆ. ವಿಜಯನಗರ ಜಿಲ್ಲೆಯ ಖ್ಯಾತ ಪ್ರವಾಸಿ ತಾಣವಾದ ಹಂಪಿಗೆ ತೆರಳಲು ಬಯಸುವ ಪ್ರವಾಸಿಗರಿಗೆ ಈ ಫ್ಲೈಟ್ ಬಹಳ ಪ್ರಯೋಜವಾಗಲಿದೆ. ಹಂಪಿ ಸಮೀಪವೇ ಇರುವ ಜಿಂದಾಲ್ ವಿದ್ಯಾನಗರ ಏರ್ಪೋರ್ಟ್ ಅನ್ನು ಈ ಫ್ಲೈಟ್ ಸಂಪರ್ಕಿಸುತ್ತದೆ.
ಸಂಜಯ್ ಘೋದಾವತ್ ಗ್ರೂಪ್ಗೆ ಸೇರಿದ ಸ್ಟಾರ್ ಏರ್ ಸಂಸ್ಥೆಗೆ ಇದು 32ನೇ ಮಾರ್ಗವಾಗಿದೆ. ದೇಶಾದ್ಯಂತ ವಿವಿಧ ಪ್ರದೇಶಗಳನ್ನು ಸಂಪರ್ಕಿಸುವ ಮಹತ್ವದ ಜಾಲ ನಿರ್ಮಿಸಿದೆ. ಕರ್ನಾಟಕದಲ್ಲಿ ಬೆಂಗಳೂರು, ಹಂಪಿ ಅಲ್ಲದೇ, ಹುಬ್ಬಳ್ಳಿ ಬೆಳಗಾವಿ, ಬೀದರ್, ಶಿವಮೊಗ್ಗ ನಗರಗಳಿಗೂ ಫ್ಲೈಟ್ ಸೇವೆ ನೀಡುತ್ತಿದೆ .
ಬೆಂಗಳೂರಿನಿಂದ ವಿಜಯನಗರದ ವಿದ್ಯಾನಗರ ಏರ್ಪೋರ್ಟ್ಗೆ ನಿತ್ಯವೂ ಒಂದು ಫ್ಲೈಟ್ ಇದೆ. ಬೆಳಗ್ಗೆ 9:50ಕ್ಕೆ ಕೆಂಪೇಗೌಡ ಏರ್ಪೋರ್ಟ್ನಿಂದ ಹೊರಟು 10:40ಕ್ಕೆ ವಿದ್ಯಾನಗರ ನಿಲ್ದಾಣ ಮುಟ್ಟುತ್ತದೆ. ಒಟ್ಟು 50 ನಿಮಿಷ ಪ್ರಯಾಣ ಅವಧಿ. ಈ ಫ್ಲೈಟ್ನಲ್ಲಿ ಎಕನಾಮಿ ಮತ್ತು ಬ್ಯುಸಿನೆಸ್ ಕ್ಲಾಸ್ಗಳಿವೆ. ಎಕನಾಮಿ ಕ್ಲಾಸ್ನಲ್ಲಿ ಒಂದು ಟಿಕೆಟ್ ಬೆಲೆ 5,250 ರೂನಿಂದ 7,088 ರೂ ಇದೆ. ಬ್ಯುಸಿನೆಸ್ ಕ್ಲಾಸ್ನ ಟಿಕೆಟ್ ದರ 10,999 ರೂ ಮತ್ತು 13,359 ರೂ ಇದೆ.
ವಿದ್ಯಾನಗರ ಏರ್ಪೋರ್ಟ್ನಿಂದ ಬೆಂಗಳೂರಿಗೆ ಬೆಳಗ್ಗೆ 11:10ಕ್ಕೆ ಫ್ಲೈಟ್ ಹೊರಡುತ್ತದೆ. 12 ಗಂಟೆಗೆ ಬೆಂಗಳೂರು ತಲುಪುತ್ತದೆ. ಇಲ್ಲಿ ಎಕನಾಮಿ ಕ್ಲಾಸ್ ಟಿಕೆಟ್ ದರ 1,850 ರೂನಿಂದ ಆರಂಭವಾಗುತ್ತದೆ. ಶನಿವಾರ, ಭಾನುವಾರ ಇತ್ಯಾದಿ ಪೀಕ್ ಇರುವ ದಿನಗಳಲ್ಲಿ ಟಿಕೆಟ್ ದರ ಹೆಚ್ಚಿರುತ್ತದೆ.