ಬೆಂಗಳೂರು, ನ. 01 (DaijiworldNews/AA): ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಥವಾ ಡಿ.ಕೆ.ಶಿವಕುಮಾರ್ ಅವರ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಗುಂಡಿ ಮುಚ್ಚುವ ಡೆಡ್ಲೈನ್ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆಶಿ ಕೇಳಿ ಎಂದಿದ್ದು ಸಿಎಂ ಅವರ ಬೇಜವಾಬ್ದಾರಿ ಹೇಳಿಕೆ ಎಂಬುದು ನನ್ನ ಅಭಿಪ್ರಾಯ. ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವ್ರಾ? ಅಥವಾ ಶಿವಕುಮಾರ್ ಅವ್ರಾ? ಮುಖ್ಯಮಂತ್ರಿಗಳ ಸಭೆ ಮಾಡಿ ಒಂದು ಡೆಡ್ಲೈನ್ ಕೊಟ್ರು. ಗುಂಡಿ ಮುಚ್ಚಲು ಕಾಲದ ಗಡುವು ಕೊಟ್ಟು ಮುಚ್ಚಿಲ್ಲ. ಮುಖ್ಯಮಂತ್ರಿ ಮಾತಿಗೂ ಸಹ ಎಷ್ಟು ಬೆಲೆ ಅಧಿಕಾರಿಗಳು ಕೋಡ್ತಾ ಇದ್ದಾರೆ ಗೊತ್ತಾಗ್ತಿದೆ. ರಾಜ್ಯದ ಸಿಎಂ ಆಗಿ ನಿರ್ವಹಣೆ ಮಾಡೋಕೆ ಅಸಮರ್ಥರಾಗಿದ್ದಾರೆ" ಎಂದು ಬೇಸರ ವ್ಯಕ್ತಪಡಿಸಿದರು.
ನ.21 ಕ್ಕೆ ಡಿಕೆಶಿ ಪದಗ್ರಹಣ ವಿಚಾರವಾಗಿ ಮಾತನಾಡಿದ ಅವರು, "ಅದು ಅವರ ಪಕ್ಷದಲ್ಲಿನ ತೀರ್ಮಾನಗಳು. ಅವರಿಗೆ ಬಿಟ್ಟಿರೋದು ನಾನು ಈ ವಿಷಯದಲ್ಲಿ ನಾನು ಮಾತಾಡೋದಿಲ್ಲ. ಮಾತಾಡಿದರೆ ಸಣ್ಣತನವಾಗುತ್ತೆ. ಅವರ ಪಕ್ಷದಲ್ಲಿ ಏನು ತೀರ್ಮಾನ ಮಾಡ್ತಾರೋ ಮಾಡಲಿ" ಎಂದರು.
ಜಾತಿಗಣತಿ ಸಮೀಕ್ಷೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಸಮೀಕ್ಷೆ ನಡೆಸಿ ಏನು ಸಾಧನೆ ಮಾಡ್ತಾರೆ ಅದರಲ್ಲಿ. ಎಷ್ಟರಮಟ್ಟಿಗೆ ಸಮೀಕ್ಷೆ ನಡೆಸಿದ್ದಾರೆ. ಎಷ್ಟರಮಟ್ಟಿಗೆ ಜನ ಆ ಸಮೀಕ್ಷೆಗೆ ಸ್ಪಂದಿಸಿದ್ದಾರೆ. ಇಲ್ಲಿ ಇರೋದು ಸರ್ಕಾರದ ಕಾರ್ಯಕ್ರಮ. ಯಾರು ಬಡತನದಲ್ಲಿ ಇದ್ದಾರೆ. ಇಲ್ಲಿ ಜಾತಿ ಪ್ರಶ್ನೆ ಇಲ್ಲ. ಎಲ್ಲ ಜಾತಿಯಲ್ಲಿ ಬಡವರು ಇದ್ದಾರೆ. ಮೊದಲು ಶಿಕ್ಷಣ ಕೊಡುವ ಕೆಲಸ ಮಾಡಬೇಕು. ಇವತ್ತು 63 ಸಾವಿರ ಶಿಕ್ಷಕರ ಕೊರತೆ ಇದೆ ಅಂತ ನೋಡ್ದೆ. ನಿಮ್ಮ ಬೆಂಗಳೂರು ವಿವಿಯಲ್ಲಿ 150 ಶಿಕ್ಷಕರನ್ನ ಇಟ್ಟುಕೊಂಡಿದ್ದಾರೆ. ಇಂತಹ ಸರ್ಕಾರ ಯಾವ ಸಮೀಕ್ಷೆ ಮಾಡಿ ಏನು ಸಾಧನೆ ಮಾಡುತ್ತೆ. ಸರ್ಕಾರದಲ್ಲಿ ಹಲವಾರು ಲೋಪಗಳು ಇವೆ. ಅವರ ಹಿಡನ್ ಅಜೆಂಡಾಗಳಿಗೆ ಮಾಡಿರುವ ಸಮೀಕ್ಷೆ ಅದು. ನಾಡಿನ ಜನತೆ ಉದ್ಧಾರಕ್ಕೆ ಮಾಡಿರೋ ಸಮೀಕ್ಷೆ ಅಲ್ಲ" ಎಂದು ಕಿಡಿಕಾರಿದರು.