ಬೆಂಗಳೂರು, ನ. 01 (DaijiworldNews/AK):ಅರಸಿನ, ಕುಂಕುಮ ಬಣ್ಣವುಳ್ಳ ಕನ್ನಡಾಂಬೆಯ ಧ್ವಜವನ್ನು ನಮ್ಮ ಹಿರಿಯರು ಶುಭದ ಸಂಕೇತವಾಗಿ ಸ್ವೀಕರಿಸಿದ್ದಾರೆ ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ವಿಶ್ಲೇಷಿಸಿದರು.

ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವ ಕುರಿತ ಸಂದೇಶ ನೀಡಿದರು.
ಕನ್ನಡ, ಕರ್ನಾಟಕದ ಏಕೀಕರಣಕ್ಕಾಗಿ ಲಕ್ಷಾಂತರ ಜನರು ಹೋರಾಟ ಮಾಡಿದ್ದಾರೆ. ಅವತ್ತಿನ ಕಾಲದಲ್ಲಿ ಲಾಠಿಯೇಟು ತಿಂದಿದ್ದರು. ಕಷ್ಟವನ್ನೂ ಅನುಭವಿಸಿದ್ದರು ಎಂದು ನೆನಪಿಸಿದರು. ಕರ್ನಾಟಕವನ್ನು ಒಟ್ಟುಗೂಡಿಸಲು ಹಿರಿಯರು ಮಾಡಿದ ತ್ಯಾಗಕ್ಕೆ ನಾವೆಲ್ಲರೂ ಕೃತಜ್ಞತೆ ಸಲ್ಲಿಸಬೇಕು; ಅವರನ್ನು ನೆನಪಿಸಬೇಕಿದೆ ಎಂದು ತಿಳಿಸಿದರು.
ಕನ್ನಡ ಅತ್ಯಂತ ಪ್ರಾಚೀನ ಭಾಷೆ. ಕನ್ನಡಕ್ಕೆ ಅದರದೇ ಆದ ಹಿರಿಮೆ, ಗೌರವ ಇದೆ ಎಂದು ಅವರು ವಿಶ್ಲೇಷಿಸಿದರು. ಕನ್ನಡದ ಬೆಳವಣಿಗೆಗೆ ನೂರಾರು ಜನ ಸಾಹಿತಿಗಳು ತಮ್ಮ ಕೊಡುಗೆ ನೀಡಿದ್ದಾರೆ ಎಂದು ವಿವರಿಸಿದರು. ಕುವೆಂಪು ಅವರ ಹಾಡನ್ನು ನಾವು ನಾಡಗೀತೆಯನ್ನಾಗಿ ಸ್ವೀಕರಿಸಿದ್ದೇವೆ ಎಂದು ಅವರು ತಿಳಿಸಿದರು.