ಪಾಟ್ನಾ, ಅ. 29 (DaijiworldNews/AK): ಇಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ, ಅಲ್ಲಿ ಪ್ರಧಾನಮಂತ್ರಿ ಹುದ್ದೆಯೂ ಖಾಲಿ ಇಲ್ಲ. ಇಲ್ಲಿ ನಿತೀಶ್ ಕುಮಾರ್ ಇದ್ದಾರೆ, ಅಲ್ಲಿ ಮೋದಿ ಇದ್ದಾರೆ. ರಾಜ್ಯದಲ್ಲಿ ಸದ್ಯ ಯಾವುದೇ ಹುದ್ದೆ ಖಾಲಿ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಈ ಮೂಲಕ ಬಿಹಾರದಲ್ಲಿ ಎನ್ಡಿಎ ಮುಖ್ಯಮಂತ್ರಿ ಅಭ್ಯರ್ಥಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿಯಾಗಿ ನರೇಂದ್ರ ಮೋದಿ, ಸಿಎಂ ಆಗಿ ನಿತೀಶ್ ಮುಂದುವರಿಯಲಿದ್ದಾರೆ ಎಂದು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡುವ ಮೂಲಕ ಬಿಹಾರದ ವರ್ಚಸ್ಸನ್ನು ಹೆಚ್ಚಿಸಿದ್ದಕ್ಕಾಗಿ ಮತ್ತು ರಾಜ್ಯದ ಪರಂಪರೆಯನ್ನು ಗೌರವಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರನ್ನು ಶ್ಲಾಘಿಸಿದ ಅಮಿತ್ ಶಾ, ಈ ನಿರ್ಧಾರ ಭಾರತದ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಅಭಿವೃದ್ಧಿಗೆ ಬಿಹಾರದ ಕೊಡುಗೆಗೆ ಕೇಂದ್ರದ ಗೌರವವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಪಹಲ್ಗಾಮ್ ದಾಳಿಯ ನಂತರ, ಪ್ರಧಾನಿ ಮೋದಿ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿದರು, ಕೇಂದ್ರ ಸರ್ಕಾರವು ಪಿಎಫ್ಐ ನಿಷೇಧಿಸಿ ಅದರ ಸದಸ್ಯರನ್ನ ವಶಕ್ಕೆ ತೆಗೆದುಕೊಂಡಿತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎಗೆ ನಿರ್ಣಾಯಕ ಗೆಲುವು ನೀಡಬೇಕು ಎಂದು ಮನವಿ ಮಾಡಿದರು.