ಬೆಂಗಳೂರು, ಅ. 29 (DaijiworldNews/AK):ಸ್ಪಷ್ಟ ಬಹುಮತ ಇರುವ ಕಾಂಗ್ರೆಸ್ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಯಾರು ಮುಖ್ಯಮಂತ್ರಿಯಾಗಿದ್ದರೂ ಕಾಂಗ್ರೆಸ್ ಸರಕಾರದಿಂದ ರಾಜ್ಯ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂಬಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಬಣಗಳು ಸೃಷ್ಟಿಯಾಗಿವೆ. ಮುಖ್ಯಮಂತ್ರಿ ಹುದ್ದೆಗಾಗಿ ಬಡಿದಾಟ ದಿನೇದಿನೇ ಹೆಚ್ಚಾಗಿದೆ. ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ ಎಂದು ಟೀಕಿಸಿದರು.
ಕಾಂಗ್ರೆಸ್ಸಿನಲ್ಲಿ ಆಂತರಿಕ ಕಚ್ಚಾಟ ದಿನೇದಿನೇ ಉಲ್ಬಣಗೊಳ್ಳುತ್ತಿದೆ. ಮುಖ್ಯಮಂತ್ರಿ ಆಗಬೇಕೆಂದು ಹಲವಾರು ಜನರು ಟವೆಲ್ ಹಾಕಿ ಕೂತಿದ್ದಾರೆ. ಮುಖ್ಯಮಂತ್ರಿಗಳ ಹೇಳಿಕೆಯನ್ನು ಆಡಳಿತ ಪಕ್ಷದ ಶಾಸಕರೇ ಒಪ್ಪುತ್ತಿಲ್ಲ. ಹೈಕಮಾಂಡ್ ಅವಕಾಶ ಮಾಡಿಕೊಟ್ಟರೆ ನಾನೇ ಸಿಎಂ ಎಂದು ಸಿದ್ದರಾಮಯ್ಯನವರೂ ಹೇಳಿದ್ದಾರೆ. ನವೆಂಬರ್ ನಂತರ ಸಿಎಂ ಆಗಿರುವರೇ ಎಂಬ ಬಗ್ಗೆ ಅವರಲ್ಲೇ ವಿಶ್ವಾಸ ಇಲ್ಲ ಎಂದು ವಿಶ್ಲೇಷಿಸಿದರು.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲೆಂದು ಕೆಲವು ಶಾಸಕರು ಕೂತಿದ್ದಾರೆ. ರೈತರು, ಬಡವರ ಬಗ್ಗೆ ಸರಕಾರವು ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಟೀಕಿಸಿದರು. ಅತಿವೃಷ್ಟಿಗೆ ಪರಿಹಾರ ಕೊಡುವ ಯೋಗ್ಯತೆಯೂ ಇಲ್ಲವೆಂದಾದರೆ ಮುಖ್ಯಮಂತ್ರಿ ಇದ್ದರೇನು? ಬಿದ್ದರೇನು ಎಂದು ಕೇಳಿದರು.
ರಾಜ್ಯದ ಗ್ಯಾರಂಟಿ ದೇಶಕ್ಕೇ ಮಾದರಿ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಹೇಳುತ್ತಿದ್ದರಲ್ಲವೇ? ಇದೇ ಕಾಂಗ್ರೆಸ್ ಪಕ್ಷವು ಸರಕಾರ ಆಡಳಿತ ನಡೆಸುವ ಹಿಮಾಚಲ ಪ್ರದೇಶ, ತೆಲಂಗಾಣ ರಾಜ್ಯಗಳು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿವೆ. ತೆಲಂಗಾಣದಲ್ಲಿ ಗ್ಯಾರಂಟಿಗಳಿಂದ ಸರಕಾರಿ ನೌಕರರಿಗೆ ವೇತನ ಕೊಡಲು ಆಗುತ್ತಿಲ್ಲ ಎಂದು ಸ್ವತಃ ಅಲ್ಲಿನ ಮುಖ್ಯಮಂತ್ರಿ ಹೇಳಿದ್ದಾರೆ ಎಂದು ಗಮನ ಸೆಳೆದರು.
ರಾಜ್ಯದಲ್ಲೂ ಇದು ವಿಭಿನ್ನವಾಗಿಲ್ಲ; ಸಂಬಳ ಕೊಡಲು ಆಗುತ್ತಿಲ್ಲ; ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಗುತ್ತಿಗೆ ಕೆಲಸ ಮಾಡಿ ಬಂಡವಾಳ ಹಾಕಿದವರು ಬೀದಿಗೆ ಬಂದಿದ್ದಾರೆ. ಸಾಲ ಸೋಲ ಮಾಡಿ ಕೆಲಸ ಮಾಡಿದ ಸಣ್ಣ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಿದರು.
ಅಧಿಕಾರಿಗಳೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೆಣ್ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಇದರ ಬಗ್ಗೆ ಗೃಹ ಸಚಿವರು, ಸರಕಾರ ಕಾಳಜಿ ತೋರುತ್ತಿಲ್ಲ. ಮುಖ್ಯಮಂತ್ರಿ ಕುರ್ಚಿ ಕಾಳಗದಿಂದ ದಿನೇದಿನೇ ಇದು ವಿಕೋಪಕ್ಕೆ ಹೋಗಲಿದೆ ಎಂದು ತಿಳಿಸಿದರು.