ಬೆಂಗಳೂರು,ಅ. 29 (DaijiworldNews/AK): ನೆರೆ ರಾಜ್ಯಗಳಲ್ಲಿ ಅಬ್ಬರಿಸುತ್ತಿರುವ ಮೊಂತಾ ಚಂಡಮಾರುತದ ಪರಿಣಾಮ ರಾಜ್ಯದ ಕೆಲ ಜಿಲ್ಲೆಗಳ ಮೇಲೆ ಉಂಟಾಗಲಿದೆ.

ಕರ್ನಾಟಕದಲ್ಲಿ ಮಳೆಯ ಪ್ರಮಾಣ ನಾಳೆ ಕಡಿಮೆಯಾಗಲಿದ್ದು, ಕರಾವಳಿ ಭಾಗದಲ್ಲಿ ಗಾಳಿಯ ಪ್ರಮಾಣ ಹೆಚ್ಚಿರಲಿದೆ. ತೆಲಂಗಾಣ, ಅಂಧ್ರ ಮತ್ತು ತಮಿಳುನಾಡಿನ ಗಡಿ ಜಿಲ್ಲೆಗಳಲ್ಲಿ ವಾತಾವರಣ ಏರಿಳಿತವಾಗಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಬಹುತೇಕ ಮೋಡ ಕವಿದ ವಾತಾವರಣ ಇರಲಿದ್ದು, ಸಣ್ಣ ಅಥವಾ ಸಾಮಾನ್ಯ ಮಳೆ ಸುರಿಯುವ ಸಂಭವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೋಲಾರ ಮತ್ತು ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಲಿದ್ದು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದ ಮಳೆಯ ಜೊತೆಗೆ ಬಾರಿ ಗಾಳಿ ಇರಲಿದೆ. ಗಾಳಿಯ ವೇಗ ಗಂಟೆಗೆ 45-55 ಕಿ.ಮೀ. ಇರಲಿದ್ದು 60 ಕಿ.ಮೀ. ತಲುಪುವ ಸಾಧ್ಯತೆ ಇದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಸಮುದ್ರಕ್ಕೆ ಮೀನುಗಾರರು ಇಳಿಯದಂತೆ ಸೂಚಿಸಲಾಗಿದೆ.
ಕರ್ನಾಟಕದ ಉತ್ತರ ಭಾಗದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ಬೀದರ್ನಲ್ಲಿ ದಟ್ಟ ಮೋಡ ಅಥವಾ ಸಣ್ಣ ಪ್ರಮಾಣದ ಮಳೆಯಾಗಲಿದೆ. ಕಲಬುರಗಿ, ಚಿತ್ರದುರ್ಗ, ಧಾರವಾಡ ಮತ್ತು ಬೆಳಗಾವಿಯಲ್ಲೂ ಮೋಡ ಕವಿದ ವಾತಾವರಣ ಇರಲಿದೆ. ಸಮುದ್ರ ತೀರಕ್ಕೆ ಯಾರೂ ತೆರಳದಂತೆ ಸೂಚಿಸಲಾಗಿದ್ದು, ಮೀನುಗಾರಿಕೆಗೂ ನಿಷೇಧ ಹೇರಲಾಗಿದೆ.