ಬೆಂಗಳೂರು, ಅ. 29 (DaijiworldNews/AK): ಬೆಂಗಳೂರಿನ ಟನೆಲ್ ರಸ್ತೆಯು ಕಾಂಗ್ರೆಸ್ ಸರಕಾರದ ಸಾಮಾಜಿಕ ಪಿಡುಗಿನ ನಿವಾರಣೆಗೆ 43 ಸಾವಿರ ಕೋಟಿಯ ಯೋಜನೆ ಎಂದು ಈಗ ಗೊತ್ತಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಟೀಕಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟನೆಲ್ ರಸ್ತೆಗೆ 43 ಸಾವಿರ ಕೋಟಿ ಖರ್ಚು ಆಗಲಿದೆ. ಹೊಸ 18 ಕಿಮೀ ಸುರಂಗ ಮಾರ್ಗ ರಚನೆಯಿಂದ ಬೆಂಗಳೂರಿನ ಎಲ್ಲ ಟ್ರಾಫಿಕ್ ಸಮಸ್ಯೆ ಪರಿಹಾರ ಹೇಗೆ ಸಾಧ್ಯ? ದುರಂತ ನಿಭಾಯಿಸುವುದು ಹೇಗೆ? ಸಾರಿಗೆ ಸಾಧ್ಯತೆ ಕುರಿತು ಅಧ್ಯಯನ ನಡೆದಿಲ್ಲ; ತಜ್ಞರು ಹೇಳಿದ್ದನ್ನೂ ಕೇಳುತ್ತಿಲ್ಲ ಎಂದು ಆಕ್ಷೇಪಿಸಿದರು.
ಸಾರ್ವಜನಿಕರ ದುಡ್ಡು ಪೋಲು ಮಾಡುವುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಇಲ್ಲ ಎಂದು ನುಡಿದರು.ವೈಜ್ಞಾನಿಕ ಪರಿಹಾರಗಳನ್ನು ನೀಡಿದ್ದೇವೆ. ಬೆಂಗಳೂರಿನ ಶೇ 70 ಜನರು ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುವಂತಾಗಬೇಕು. ಆ ನಿಟ್ಟಿನಲ್ಲಿ 5 ಅಂಶಗಳನ್ನು ಮುಂದಿಟ್ಟಿದ್ದೇವೆ. ಎಲ್ಲ ಯೋಜನೆಗಳು ವಿಳಂಬವಾಗಿವೆ ಮತ್ತು ನಿಧಾನವಾಗಿವೆ. ಹೊಸ ಯೋಜನೆಗಳನ್ನು ಆರಂಭಿಸುವ ಮೊದಲು ಬಾಕಿ ಇರುವ ಯೋಜನೆ ಮುಗಿಸಿ. ಕಡಿಮೆ ಸಮಯ, ಕಡಿಮೆ ಖರ್ಚಿನಲ್ಲಿ ಅತಿ ಹೆಚ್ಚು ಜನರಿಗೆ ಪ್ರಯೋಜನ ಲಭಿಸಬೇಕಿದೆ. ಕಾರುಗಳಿಗೆ ಆದ್ಯತೆ ಕೊಡುವ ಹಾಗೆ ಇರಬಾರದು ಎಂದಿರುವುದಾಗಿ ಹೇಳಿದರು.
ಸಾರ್ವಜನಿಕ ಸಾರಿಗೆಗೆ ಆದ್ಯತೆ ಇರಲಿ; ಸಮನ್ವಯತೆಯಿಂದ ಕೆಲಸ ನಡೆಯಲಿ. ನಡೆದುಕೊಂಡು ಓಡಾಡುವ ಸಾರ್ವಜನಿಕರಿಗೆ ಫುಟ್ಪಾತ್ ರಸ್ತೆ ಇರಬೇಕು. ಕಳೆದ 3 ವರ್ಷಗಳಿಂದ ರಸ್ತೆಯಲ್ಲಿ ನಡೆದಾಡುವ ಜನರ ಗರಿಷ್ಠ ಸಾವು ಸಂಭವಿಸುತ್ತಿದೆ. ಇದು ಬೆಂಗಳೂರಿನಲ್ಲಿ ಗರಿಷ್ಠ ಪ್ರಮಾಣದಲ್ಲಿದೆ ಎಂದು ಗಮನ ಸೆಳೆದರು.
ಪುಲ್ವಾಮಾ ದಾಳಿಯಲ್ಲಿ ಕರ್ನಾಟಕದ 3 ಜನರು ಸತ್ತಿದ್ದರು. ಅದು ದೊಡ್ಡ ಸುದ್ದಿ ಆಗಿತ್ತು. ಬೆಂಗಳೂರಿನಲ್ಲಿ ಪ್ರತಿದಿನ 15-20 ಜನರು ರಸ್ತೆಯಲ್ಲಿ ನಡೆದುಕೊಂಡು ಹೋಗುವವರು ಸಾಯುತ್ತಾರೆ. ಬೆಂಗಳೂರಿಗೆ ಸಬರ್ಬನ್ ರೈಲು, ಮೆಟ್ರೋ, ಟ್ರ್ಯಾಮ್ಗಳು, ರಿಂಗ್ ರೈಲ್ ಬೇಕಿದೆ ಎಂದು ಅವರು ತಿಳಿಸಿದರು.