ನವದೆಹಲಿ, ಅ. 29 (DaijiworldNews/AK): ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹರಿಯಾಣದ ಅಂಬಾಲಾ ವಾಯುಪಡೆ ನೆಲೆಯಿಂದ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ. ಈ ಮೂಲಕ ರಫೇಲ್ನಲ್ಲಿ ಹಾರಾಟ ನಡೆಸಿದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಐದು ತಿಂಗಳ ಹಿಂದೆ, ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಳ್ಳಲು ಭಾರತ ಆಪರೇಷನ್ ಸಿಂಧೂರ ನಡೆಸಿತು. ಇದೇ ವಾಯುನೆಲೆಯಿಂದ ರಫೇಲ್ಗಳು ಗಡಿಯುದ್ದಕ್ಕೂ ಭಯೋತ್ಪಾದಕ ಶಿಬಿರಗಳನ್ನು ನಾಶಮಾಡುವ ಕಾರ್ಯಾಚರಣೆ ನಡೆಸಿದ್ದವು. ಆ ಮೂಲಕ ಭಾರತವು ಭಯೋತ್ಪಾದನಾ ವಿರೋಧಿ ಸಂದೇಶ ರವಾನಿಸಿತ್ತು
ಮುರ್ಮು ಅವರು ಯುದ್ಧ ವಿಮಾನದಲ್ಲಿ ನಡೆಸುತ್ತಿರುವ ಎರಡನೇ ಹಾರಾಟ ಇದು. ಭಾರತದ ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ 2023ರ ಏಪ್ರಿಲ್ 8 ರಂದು ಅಸ್ಸಾಂನ ತೇಜ್ಪುರ ವಾಯುಪಡೆ ನಿಲ್ದಾಣದಲ್ಲಿ ಸುಖೋಯ್-30 ಎಂಕೆಐ ಜೆಟ್ನಲ್ಲಿ ಮುರ್ಮು ಹಾರಾಟ ನಡೆಸಿದ್ದರು. ಹೀಗೆ ಹಾರಾಟ ನಡೆಸಿದ ಮೂರನೇ ರಾಷ್ಟ್ರಪತಿ ಮತ್ತು ಎರಡನೇ ಮಹಿಳಾ ರಾಷ್ಟ್ರಪತಿ ಎನಿಸಿಕೊಂಡರು.