ನವದೆಹಲಿ, ಅ. 28 (DaijiworldNews/AK): ಚಂಡಮಾರುತದ ಮುನ್ನೆಚ್ಚರಿಕೆ ಕ್ರಮವಾಗಿ, ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಭಾರತೀಯ ರೈಲ್ವೇ 100ಕ್ಕೂ ಅಧಿಕ ರೈಲು ಸೇವೆಗಳನ್ನು ರದ್ದುಗೊಳಿಸಿದೆ. ಜೊತೆಗೆ ಹಲವಾರು ರೈಲುಗಳ ಮಾರ್ಗದಲ್ಲಿಯೂ ಬದಲಾವಣೆ ಮಾಡಿದ್ದು, ಕೆಲವು ರೈಲುಗಳ ಸಮಯವನ್ನು ಮರುನಿಗದಿಪಡಿಸಿದೆ.

ಚಂಡಮಾರುತ ಮೊಂಥಾ ರಾಜ್ಯಕ್ಕೆ ಕಾಲಿಡುತ್ತಿದ್ದಂತೆ ಆಂಧ್ರದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಮತ್ತು ಬಲವಾದ ಗಾಳಿ ಬೀಸುತ್ತಿದೆ. ಚಂಡಮಾರುತ ಮೊಂಥಾ ಮಧ್ಯರಾತ್ರಿಯ ಸುಮಾರಿಗೆ ತೀವ್ರ ಚಂಡಮಾರುತವಾಗಿ ಕಾಕಿನಾಡದ ಸುತ್ತಮುತ್ತಲಿನ ಮಚಲಿಪಟ್ನಂ ಮತ್ತು ಕಳಿಂಗಪಟ್ಟಣಂ ನಡುವೆ ಆಂಧ್ರಪ್ರದೇಶದ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ.
ಚಂಡಮಾರುತವು ಕರಾವಳಿಯನ್ನು ಸಮೀಪಿಸುತ್ತಿದ್ದಂತೆ, ಅದು ತೀವ್ರಗೊಳ್ಳುವ ನಿರೀಕ್ಷೆಯಿದ್ದು, ಗಂಟೆಗೆ 90-100 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಗಂಟೆಗೆ 110 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ.
ಆಂಧ್ರಪ್ರದೇಶದ 19 ಜಿಲ್ಲೆಗಳಿಗೆ ಹವಾಮಾನ ಕಚೇರಿ ರೆಡ್ ಅಲರ್ಟ್ ಘೋಷಿಸಿದ್ದು, ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ. ನೆರೆಯ ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ಕೇರಳ ಮತ್ತು ಕರ್ನಾಟಕದಲ್ಲೂ ಮಧ್ಯಮದಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಮೊಂಥಾ ಚಂಡಮಾರುತ ಅಪ್ಪಳಿಸಿದ ಹಿನ್ನೆಲೆ ಭಾರತೀಯ ರೈಲ್ವೇ 100ಕ್ಕೂ ಅಧಿಕ ರೈಲುಗಳನ್ನು ರದ್ದುಗೊಳಿಸಿದೆ. ಜೊತೆಗೆ 30ಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದಾಗಿವೆ.
ಆಂಧ್ರಪ್ರದೇಶ ಕರಾವಳಿ ಪ್ರದೇಶಗಳಾದ ಕಾಕಿನಾಡ, ಭೀಮಾವರಂ, ವಿಜಯವಾಡ, ರಾಜಮಂಡ್ರಿ ಮತ್ತು ವಿಶಾಖಪಟ್ಟಣಂ ಕಡೆ ಭೂಕುಸಿತ ಉಂಟಾಗುವ ಸಾಧ್ಯತೆಗಳಿದ್ದು, ಈ ಹಿನ್ನೆಲೆ ಭಾರತೀಯ ರೈಲ್ವೆ ಇಲಾಖೆಯು ರೈಲು ಸಂಚಾರವನ್ನು ರದ್ದುಗೊಳಿಸಿದೆ. ಜೊತೆಗೆ ಪ್ರಯಾಣಿಕರು ರೈಲು ನಿಲ್ದಾಣಕ್ಕೆ ತೆರಳುವ ಮುನ್ನ ಭಾರತೀಯ ರೈಲ್ವೆಯ ಅಧಿಕೃತ ವೆಬ್ಸೈಟ್, ಐಆರ್ಸಿಟಿಸಿ ಮೂಲಕ ಅಪ್ಡೇಟ್ಗಳನ್ನು ತಿಳಿದುಕೊಳ್ಳಿ ಹಾಗೂ ರದ್ದಾದ ಎಲ್ಲಾ ರೈಲುಗಳ ಪೂರ್ಣ ಮರುಪಾವತಿ ನೀಡಲಾಗುವುದು ಎಂದು ತಿಳಿಸಿದೆ.