ಬೆಂಗಳೂರು, ಅ. 28 (DaijiworldNews/AK): ಸ್ಪೀಕರ್ ಯು.ಟಿ.ಖಾದರ್ ಅವರ ಅವಧಿಯಲ್ಲಿ ವಿವಾದ, ಗೊಂದಲ, ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ ಎಂದು ಸಂಸದ ಮತ್ತು ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಸ್ಪೀಕರ್ ಸ್ಥಾನದ ವಿರುದ್ಧ ಬಂದಿರುವ ಆರೋಪಗಳಿಂದ ಆ ಸ್ಥಾನವು ಮುಕ್ತವಾಗಬೇಕು. ಇದಕ್ಕಾಗಿ ಕಾರ್ಯನಿರತ ನ್ಯಾಯಮೂರ್ತಿಗಳಿಂದ ಆರೋಪಗಳ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಸ್ಪೀಕರ್ ಕಾರ್ಯಾಲಯದ ಟೆಂಡರ್ ಮಂಗಳೂರು ಮೂಲದವರಿಗೇ ಯಾಕೆ ಸಿಗುತ್ತಿದೆ ಎಂದು ಕೇಳಿದ ಅವರು, ಅದೂ ಯಾರಿಗೋ ಕೆಲವರಿಗೇ ಯಾಕೆ ಸಿಗುತ್ತಿದೆ ಎಂದು ಪ್ರಶ್ನೆ ಮಾಡಿದರು.
ವಿಧಾನಸಭಾಕ್ಷರ ಸಚಿವಾಲಯದ ಅಧಿಕಾರಿಗಳ ಅಭಿಪ್ರಾಯ ಏನಿತ್ತು? ನನಗೆ ಗೊತ್ತಿರುವ ಪ್ರಕಾರ ಹಣಕಾಸು ಇಲಾಖೆ ಖರೀದಿಗಳನ್ನು ತಿರಸ್ಕರಿಸಿದೆ. ಬಳಿಕ ಹಣಕಾಸು ಇಲಾಖೆ ಹೊಣೆ ಹೊತ್ತ ಮುಖ್ಯಮಂತ್ರಿಗಳೇ ಒಪ್ಪಿಗೆ ಕೊಡಿಸಿದ ಆರೋಪವಿದೆ. ಯು.ಟಿ.ಖಾದರರಿಗೆ ಸ್ವತಃ ಸಿಎಂ ಅವರೇ ಬೆಂಬಲ ಕೊಟ್ಟ ಆಕ್ಷೇಪವಿದೆ ಎಂದರು. ಖರೀದಿ ತುರ್ತಾಗಿ ಮಾಡಬೇಕಾದ ಕೆಲಸ ಏನಿತ್ತು? ಎಂದು ಕೇಳಿದರು.
ವಿಧಾನಸಭೆಯ ಪ್ರಧಾನ ಬಾಗಿಲಿಗೆ ರೋಸ್ ವುಡ್ನ ಮರದ ಕೆತ್ತನೆಯ ಚೌಕಟ್ಟನ್ನು ಮಾಡಿಸಿದಲ್ಲಿಂದ ಭ್ರಷ್ಟಾಚಾರದ ಆರೋಪಗಳು ಆರಂಭವಾಗಿತ್ತು. ಸಭಾಂಗಣಕ್ಕೆ ಹೊಸ ಟಿ.ವಿ.ಸೆಟ್ ಅನ್ನು ಅಳವಡಿಸಿದ್ದರು. ಎಐ ಮಾನಿಟರ್ ಸಿಸ್ಟಂ ಅನ್ನು ಹಾಕಲು ಸಾಕಷ್ಟು ಖರ್ಚು ವೆಚ್ಚಗಳಾಗಿವೆ. ಎಲ್ಲ ಶಾಸಕರಿಗೆ ಗಂಡಭೇರುಂಡ ಹೋಲಿಕೆಯ ಗಡಿಯಾರಗಳನ್ನು ಕೊಟ್ಟರು. ಮೊಗಸಾಲೆಯಲ್ಲಿ ಯಂತ್ರ ಅಳವಡಿಸಿ ಮಸಾಜ್ ಪಾರ್ಲರ್ ಮಾದರಿಯಲ್ಲಿ ಬದಲಾಯಿಸಿದ್ದಕ್ಕೆ ದೊಡ್ಡ ಪ್ರಮಾಣದ ವಿರೋಧ ವ್ಯಕ್ತವಾಗಿತ್ತು ಎಂದು ತಿಳಿಸಿದರು.
ಊಟ, ಉಪಹಾರ ಅಗತ್ಯವಿತ್ತೇ?
ಸರಕಾರದ ವತಿಯಿಂದ ಊಟ, ಉಪಹಾರ ಕೊಡಲು ಸ್ಪೀಕರ್ ಆರಂಭಿಸಿದರು. ಇದು ಅಗತ್ಯವಿತ್ತೇ? ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೇಳಿ, ಇಲ್ಲ ಎಂದು ಮೇಲ್ನೋಟಕ್ಕೆ ಕಾಣುತ್ತದೆ ಎಂದರು. ಹಾಸು ಹೊದಿಕೆ ಬದಲಿಸಿ, ಕಾರ್ಪೆಟ್ ಬದಲಿಸಿದ್ದಲ್ಲದೇ ಸುಣ್ಣ ಬಣ್ಣ ಹೊಡೆಸಿದರು. ಅವರು ಒಂದೊಂದು ಮುಟ್ಟಿದರೂ ಅದರೊಳಗೆ ಇನ್ನೇನೋ ಇದೆ ಎಂಬ ಅನುಮಾನಗಳು ವ್ಯಾಪಕವಾಗಿ ಬೆಳವಣಿಗೆ ಆಗಿದೆ ಎಂದು ವಿಶ್ಲೇಷಿಸಿದರು.
ಶಾಸಕರ ಭವನದಲ್ಲಿ ಶಾಸಕರ ಕೊಠಡಿಗಳನ್ನು ಭದ್ರ ಪಡಿಸಲು, ಇನ್ನಷ್ಟು ವ್ಯವಸ್ಥೆ ಕಲ್ಪಿಸಿಕೊಡಲು ಸ್ಮಾರ್ಟ್ ಡೋರ್ ಲಾಕರ್ ಹಾಕಿಸಿದರು. ಗಾಡ್ರೆಜ್ನಂಥ ಕಂಪೆನಿಯವರ ಬೆಲೆ 14- 16 ಸಾವಿರ ಇದೆ ಎಂದು ಆನ್ಲೈನ್ ಪರಿಶೀಲನೆಯಿಂದ ಗೊತ್ತಾಗುತ್ತದೆ. ಅದಕ್ಕೆ ಇವರು 49 ಸಾವಿರಕ್ಕಿಂತ ಹೆಚ್ಚು ಖರ್ಚು ತೋರಿಸಿದರು ಎಂದು ದೂರಿದರು. ಇದರ ಜೊತೆಗೆ ಸ್ಮಾರ್ಟ್ ಸೇಫ್ ಲಾಕರ್ ಹಾಕಿಸಿದರು. ಅದು ಮಾರ್ಕೆಟ್ನಲ್ಲಿ 8-9 ಸಾವಿರಕ್ಕೆ ಸಿಗುವುದಾಗಿ ಆನ್ಲೈನ್ನಲ್ಲಿದೆ. ಇವರು 35 ಸಾವಿರದ ಮೇಲೆ ದರ ವಿಧಿಸಿದರು ಎಂದು ಆಕ್ಷೇಪಿಸಿದರು.