ಬೆಂಗಳೂರು, ಅ. 27 (DaijiworldNews/AK): ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ರಸ್ತೆಗುಂಡಿ ಇರುವಲ್ಲಿಗೆ ಭೇಟಿ ಕೊಟ್ಟರೆ ಜನರು ಛೀಮಾರಿ ಹಾಕುವ ಭಯದಿಂದ ಪಾರ್ಕ್ಗಳಿಗೆ ನಡಿಗೆ ಆರಂಭಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಟೀಕಿಸಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರ ರಸ್ತೆಗಳನ್ನೇ ಮರೆತುಬಿಟ್ಟಿದೆ ಎಂದು ಆಕ್ಷೇಪಿಸಿದರು. ಬೆಂಗಳೂರಿನ ರಸ್ತೆಗಳು ಮೃತ್ಯು ಕೂಪಗಳಾಗಿವೆ. ಇಡೀ ಬೆಂಗಳೂರಿನಲ್ಲಿ 10-12 ಜನರು ಸತ್ತಿದ್ದಾರೆ ಎಂದರು. ರಸ್ತೆ ಗುಂಡಿ ಮರೆಮಾಚಲು ಪಾರ್ಕ್ಗಳ ಮೊರೆ ಹೋಗಿದ್ದಾರೆ ಎಂದು ದೂರಿದರು. ಗುಂಡಿ ತಪ್ಪಿಸಲು ಹೋಗಿ ಅಪಘಾತದಿಂದ ಸತ್ತದ್ದು ಜಗಜ್ಜಾಹೀರಾಗಿದೆ ಎಂದರು. ಗುಂಡಿಗಳಿಗೆ ಇನ್ನೆಷ್ಟು ಬಲಿ ಬೇಕು ಎಂದು ಪ್ರಶ್ನಿಸಿದರು.
ಕೂಲಿಂಗ್ ಗ್ಲಾಸಿನಲ್ಲಿ ಹಳ್ಳ ಕಾಣುವುದಿಲ್ಲ; ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಎಲ್ಲ ಜನತೆಗೆ ತಾವು ಹಾಕಿದ ಮಾದರಿಯ ಕೂಲಿಂಗ್ ಗ್ಲಾಸ್ ಕೊಡಿಸಲಿ ಎಂದು ವ್ಯಂಗ್ಯವಾಡಿದರು. ಇದು ಬೇಜವಾಬ್ದಾರಿತನದ ಪರಮಾವಧಿ ಎಂದು ಟೀಕಿಸಿದರು. ಅಂಗನವಾಡಿಯವರಿಗೆ 3 ತಿಂಗಳಿಂದ ಸಂಬಳ ಇಲ್ಲ; ಲೈಬ್ರೆರಿಯನ್ ಗಳಿಗೂ ಸಂಬಳ ನೀಡಿಲ್ಲ; ನೀರಗಂಟಿಗಳಿಗೆ 2 ವರ್ಷದಿಂದ ವೇತನ ಕೊಟ್ಟಿಲ್ಲ. ಗುಂಡಿಗಳ ಪರಿಸ್ಥಿತಿ ಇನ್ನೊಂದು ವಾರ ಕಳೆದರೂ ಬದಲಾಗುವುದಿಲ್ಲ; ಹೆಣ್ಮಕ್ಕಳು ಅಪಘಾತದಿಂದ ಸಾಯುತ್ತ ಇರುತ್ತಾರೆ ಎಂದು ತಿಳಿಸಿದರು. ಅಧಿಕಾರಿಗಳಂತೂ ಕೈಚೆಲ್ಲಿ ಕುಳಿತಿದ್ದಾರೆ ಎಂದರು.
5 ಪಾಲಿಕೆ ಮಾಡಿದ್ದಾರೆ. ಟೆಂಡರ್ ಕರೆಯಲು ಸಂಸ್ಥೆಯೇ ಇಲ್ಲ. ಇಲ್ಲಿ ಸಂಸ್ಥೆಯೇ ಇಲ್ಲ. ಓನ್ಲಿ ಡೆಡ್ ಬಾಡಿ ಇನ್ ಬೆಂಗಳೂರು ಎಂದು ಆರೋಪಿಸಿದರು. 5 ಪಾಲಿಕೆಗೆ ಹಣವನ್ನು ಎಷ್ಟೆಂದು ವಿಂಗಡಿಸಲು ಸಾಧ್ಯ ಎಂದು ಕೇಳಿದರು. ಟೆಂಡರ್ ಕರೆದರೆ 65 ದಿನ, ಕೆಲಸ ಶುರು ಮಾಡಲು 2 ತಿಂಗಳು ಬೇಕು. ಜಿಬಿಎಗೆ ಕೊಡಲು ಹಣದ ಮೂಲ ಎಲ್ಲಿಂದ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಶಿವಕುಮಾರ್ಗೆ ಗೊತ್ತಿದ್ದಷ್ಟೇ ಕಾನೂನು ನನಗೂ ಗೊತ್ತಿದೆ. ಬಿಬಿಎಂಪಿಯನ್ನು ನೀವು ಹೇಗೆ ರದ್ದು ಮಾಡಿದಿರಿ? ನೀವು ರದ್ದು ಮಾಡಿದಂತೆ ನಾವೂ ಮಾಡಿ ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಒಂದೇ ಆಗಿ ಮಾಡುತ್ತೇವೆ ಎಂದು ಸವಾಲು ಹಾಕಿದರು.
ನವೆಂಬರ್ನಲ್ಲಿ ಅಧಿಕಾರ ಹಸ್ತಾಂತರ, ಕ್ರಾಂತಿ, ಭ್ರಾಂತಿ, ಅಲುಗಾಡುವ ಸ್ಥಿತಿ ಇರಲಿದೆ. ಮುಖ್ಯಮಂತ್ರಿಯ ಮಗ ದೆಹಲಿ ಹೈಕಮಾಂಡಿಗಿಂತ ಮೇಲಿದ್ದಾರೆ. ಅವರೇ ಮುಂದಿನ ಸಿಎಂ ಕುರಿತು ಮಾತನಾಡಿದ್ದಾರೆ ಎಂದು ತಿಳಿಸಿದರು. ನೋ ಡೆಲ್ಲಿ ಎನ್ನುವವರು ರಾತ್ರೋರಾತ್ರಿ ದೆಹಲಿಗೆ ಓಡುತ್ತಿದ್ದಾರೆ. ಸುಭದ್ರ ಸರಕಾರ ಬೇಕಿದೆ. ಆದರೆ, ಇಲ್ಲಿ ಸರಕಾರವೇ ಅಲ್ಲಾಡುತ್ತಿದೆ ಎಂದರು.