ಚೆನ್ನೈ, ಅ. 27 (DaijiworldNews/AA): ಕರೂರು ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿಯಾಗಿ, 7.8 ಕೋಟಿ ರೂ. ಪರಿಹಾರ ನೀಡಿ ನಟ, ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ಅವರು ಸಾಂತ್ವನ ಹೇಳಿದ್ದಾರೆ.

ಸೆ.27ರಂದು ತಮಿಳುನಾಡಿನ ಕರೂರಿನಲ್ಲಿ ನಡೆದ ಟಿವಿಕೆ ವಿಜಯ್ ಅವರ ರ್ಯಾಲಿಯಲ್ಲಿ 41 ಜನ ಪ್ರಾಣ ಕಳೆದುಕೊಂಡಿದ್ದರು. ಘಟನೆ ನಡೆದು ಬರೋಬ್ಬರಿ ಒಂದು ತಿಂಗಳಿಗೆ ವಿಜಯ್ ಮೃತರ ಕುಟುಂಬಸ್ಥರನ್ನ ಭೇಟಿ ಮಾಡಿ, ಕರೂರಿನಲ್ಲಿ ಭೇಟಿಯಾಗದಿರೋದಕ್ಕೆ ಅವರು ಕ್ಷಮೆಯಾಚಿಸಿದ್ದಾರೆ.
ಮೃತಪಟ್ಟವರ ಕುಟುಂಬಸ್ಥರನ್ನು ಚೆನ್ನೈ ಬಳಿಯ ಮಹಾಬಲಿಪುರಂನಲ್ಲಿರುವ ರೆಸಾರ್ಟ್ನಲ್ಲಿ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 20 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 2 ಲಕ್ಷ ರೂ.ಯಂತೆ ಒಟ್ಟು 7.8 ಕೋಟಿ ರೂ. ಪರಿಹಾರ ವಿತರಿಸಿದ್ದಾರೆ. ಇನ್ನೂ ಇದೇ ವೇಳೆ ಸಂತ್ರಸ್ತ ಕುಟುಂಬಗಳಿಗೆ ಶಿಕ್ಷಣದ ಜೊತೆಗೆ ಆರ್ಥಿಕ ಸಹಾಯ, ಉದ್ಯೋಗದ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕರೂರಿನಿಂದ ಒಟ್ಟು 37 ಕುಟುಂಬಗಳನ್ನು ರೆಸಾರ್ಟ್ಗೆ ಕರೆತರಲಾಗಿತ್ತು. ಅವರಿಗಾಗಿ ಟಿವಿಕೆ ಪಕ್ಷ, ರೆಸಾರ್ಟ್ನ ಸುಮಾರು 50 ಕೊಠಡಿಗಳನ್ನು ಕಾಯ್ದಿರಿಸಿತ್ತು. ವಿಜಯ್ ಸಂತ್ರಸ್ತ ಕುಟುಂಬಸ್ಥರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು.