ನವದೆಹಲಿ, ಅ. 27 (DaijiworldNews/AA): ದೇಶಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರು, "ಬಿಹಾರದಲ್ಲಿ ನಡೆಸಿದ ಎಸ್ಐಆರ್ ಯಶಸ್ವಿಯಾಗಿದೆ. ಈಗ ಎರಡನೇ ಹಂತದಲ್ಲಿ ಮುಂದೆ 1-2 ವರ್ಷದ ಒಳಗಡೆ ಚುನಾವಣೆ ನಡೆಯಲಿರುವ 12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್ಐಆರ್ ಶುರುವಾಗಲಿದೆ" ಎಂದರು.
ಆಯೋಗದ ಕಾನೂನಿನ ಪ್ರಕಾರ ಮತದಾರರ ಪಟ್ಟಿ ಪರಿಷ್ಕರಣೆ ಅಗತ್ಯವಿದೆ. ಪ್ರತಿಯೊಂದು ರಾಜಕೀಯ ಪಕ್ಷವೂ ಪರಿಷ್ಕರಣೆ ನಡೆಸದ ಬಗ್ಗೆ ದೂರು ನೀಡಿವೆ. ಇಲ್ಲಿಯವರಗೆ ಎಂಟು ಬಾರಿ ಎಸ್ಐಆರ್ ನಡೆಸಿದೆ. 2002-2004 ರಲ್ಲಿ ಕೊನೆಯದಾಗಿ ಎಸ್ಐಆರ್ ನಡೆಸಲಾಗಿತ್ತು. ಎರಡು ದಶಕದ ಬಳಿಕ ಈಗ ಎಸ್ಐಆರ್ ಮಾಡಲಾಗುತ್ತಿದೆ ಎಂದು ಹೇಳಿದರು.