ಬೆಂಗಳೂರು, ಅ. 27 (DaijiworldNews/ AK): ಸುರಂಗ ಮಾರ್ಗ ರಚನೆ ಮೂಲಕ ಬೆಂಗಳೂರಿಗೆ ಆಪತ್ತು ಎದುರಾಗಲಿದೆ ಎಂಬ ವರದಿಗಳಿವೆ. ಇಷ್ಟಿದ್ದರೂ ಡಿ.ಕೆ.ಶಿವಕುಮಾರ್ ಅವರು ಇದನ್ನು ಮಾಡಲು ಮುಂದಾಗಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರಿಸಿದರು. ಈ ಸುರಂಗ ಯೋಜನೆ ವಿರುದ್ಧ ಈಗಾಗಲೇ ಹಲವು ಸಂಸ್ಥೆಗಳು- ಪರಿಸರವಾದಿಗಳು ಧ್ವನಿ ಎತ್ತಿದ್ದಾರೆ. ಅದೇನು ಜನೋಪಯೋಗಿ ಎಂದು ನನಗೆ ಅನಿಸುತ್ತಿಲ್ಲ; ಟನೆಲ್ ರಸ್ತೆಗೆ 300- 400 ರೂ. ಟೋಲ್ ಕೊಡಬೇಕಾಗುತ್ತದೆ. ಹಣ ಕಟ್ಟಿಸಿಕೊಳ್ಳದೇ ಮಾಡುವ ಕೆಲಸ ಇದ್ದರೆ ಮಾಡಿ ಎಂದು ಆಗ್ರಹಿಸಿದರು.
ಭೂಮಿ ಮೇಲೆ ರಸ್ತೆ ಮಾಡುವುದು ಸೂಕ್ತವಿದ್ದು, ಈ ಕುರಿತು ಗಮನಿಸಲಿ ಎಂದು ಒತ್ತಾಯಿಸಿದರು.
ಬೆಂಗಳೂರು ಬೆಳೆಸುವುದನ್ನು ನಿಲ್ಲಿಸಿ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಬೆಳೆಸಿ ಎಂದು ತಿಳಿಸಿದರು. ಅಲ್ಲಿ ಜನರು ನಿಲ್ಲುವಂತೆ ಮಾಡಿ. ಗುಲ್ಬರ್ಗದ ಸ್ಥಿತಿ ಏನಾಗಿದೆ? ತಲಾದಾಯದ ವಿಷಯದಲ್ಲಿ ಅದು ಅತ್ಯಂತ ಹಿಂದುಳಿದಿದೆ ಎಂದು ನುಡಿದರು.
ವಿವೇಕದ ಪ್ರಶ್ನೆ ಇದ್ದಂತಿಲ್ಲ
ಪ್ರಿಯಾಂಕ್ ಖರ್ಗೆ ಬಳಿ ವಿವೇಕದ ಪ್ರಶ್ನೆಗಳಿವೆ ಎಂದು ಅನಿಸುತ್ತಿಲ್ಲ; ಆದ್ದರಿಂದ ಅವರ ಪ್ರಶ್ನೆಗಳಿಗೆ ನಾನು ಉತ್ತರ ಕೊಡುವುದಿಲ್ಲ ಎಂದರು. ಆರೆಸ್ಸೆಸ್ಗೆ ದೇಣಿಗೆ ಎಲ್ಲಿಂದ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ಬಗ್ಗೆ ಪತ್ರಕರ್ತರು ಗಮನ ಸೆಳೆದರು. ಇದನ್ನು ಇಲಾಖೆ ಪ್ರಶ್ನಿಸಲಿ. ಇ.ಡಿ, ಆದಾಯ ತೆರಿಗೆ ಇಲಾಖೆಯವರು ಕೇಳಲಿ, ಎಲ್ಲೋ ಕುಳಿತು ಕೇಳುವವರಿಗೆ ಅವರು ಉತ್ತರ ಕೊಡುತ್ತ ಕೂರುತ್ತಾರಾ ಎಂದು ಕೇಳಿದರು.