ನವದೆಹಲಿ, ಅ. 26 (DaijiworldNews/TA): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 127ನೇ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮ ಈ ಬಾರಿ ವಿಶೇಷತೆಯನ್ನೊಳಗೊಂಡಿತ್ತು. ಸದಾ ಹಿಂದಿಯಲ್ಲೇ ಮಾತನಾಡುವ ಪ್ರಧಾನಿ ಮೋದಿ ಈ ಬಾರಿಯೂ ಹಿಂದಿಯಲ್ಲೇ ಮಾತನಾಡಿದರು, ಆದರೆ ಆಶ್ಚರ್ಯವೆಂದರೆ ಅವರ ಧ್ವನಿ ಹಲವು ಭಾರತೀಯ ಭಾಷೆಗಳಲ್ಲಿ ಪ್ರಸಾರವಾಯಿತು. ಈ ಬಾರಿ ಕಾರ್ಯಕ್ರಮದ ಭಾಷಾಂತರಕ್ಕಾಗಿ ಸರ್ಕಾರ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಿಕೊಂಡಿದೆ. ಎಐ ಮೂಲಕ ಸೃಷ್ಟಿಸಿದ ಧ್ವನಿ, ನರೇಂದ್ರ ಮೋದಿ ಅವರ ನೈಜ ಧ್ವನಿಯನ್ನು ಹೋಲುವ ಮಟ್ಟಿಗೆ ನಿಖರವಾಗಿದ್ದು, ಕನ್ನಡ, ತಮಿಳು, ಒಡಿಯಾ ಸೇರಿದಂತೆ ಅನೇಕ ಭಾಷೆಗಳಲ್ಲಿ ಪ್ರಸಾರವಾಯಿತು. ಕನ್ನಡ ಆಡಿಯೋ ಕೇಳಿದವರು ಮೋದಿ ಅವರು ಸ್ವತಃ ಕನ್ನಡದಲ್ಲೇ ಮಾತನಾಡಿದರೆಂಬ ಅನುಮಾನ ಉಂಟಾಗುವಷ್ಟರ ಮಟ್ಟಿಗೆ ಆ ಧ್ವನಿ ನೈಜವಾಗಿತ್ತು.

ಈ ವಾರದ ಮನ್ ಕೀ ಬಾತ್ ಎಪಿಸೋಡ್ನಲ್ಲಿ ಪ್ರಧಾನಿ ಮೋದಿ ಅವರು ಹಲವು ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳ ಬಗ್ಗೆ ಮಾತನಾಡಿದರು. ವಂದೇ ಮಾತರಂ ಹಾಡು ರಚನೆಯ 150ನೇ ವಾರ್ಷಿಕೋತ್ಸವವನ್ನು ಸ್ಮರಿಸಿ, ದೇಶದ ಜನತೆ ಅದನ್ನು ಗೌರವದಿಂದ ಆಚರಿಸುವಂತೆ ಕೋರಿದರು. ಅದೇ ವೇಳೆ, ‘ಎಖ್ ಪೇಡ್ ಮಾ ಕೆ ನಾಮ್’ (ಒಂದು ಮರ, ಅಮ್ಮನ ಹೆಸರಿನಲ್ಲಿ) ಎನ್ನುವ ಪರಿಸರ ಸಂರಕ್ಷಣಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಜನರಿಗೆ ಕರೆ ನೀಡಿದರು. ಛತ್ತೀಸ್ಗಡದಲ್ಲಿ ಹೊಸ ಪ್ರಯೋಗವಾಗಿ ಬೆಳೆಯುತ್ತಿರುವ ‘ಗಾರ್ಬೇಜ್ ಕ್ಯಾಫೆ’ಗಳ ಬಗ್ಗೆ ಉಲ್ಲೇಖಿಸಿ, ಸ್ವಚ್ಛ ಭಾರತ ಅಭಿಯಾನದಲ್ಲಿ ಜನರ ನವೀನ ಪ್ರಯತ್ನಗಳನ್ನು ಪ್ರಶಂಸಿಸಿದರು.
ಈ ಬಾರಿ ಎಐ ತಂತ್ರಜ್ಞಾನ ಬಳಸಿ ಪ್ರಸಾರ ಮಾಡಿದ ಮನ್ ಕೀ ಬಾತ್ ಸರ್ಕಾರದ ಸಂವಹನ ವ್ಯವಸ್ಥೆಯಲ್ಲಿ ಹೊಸ ಪ್ರಯೋಗಕ್ಕೆ ದಾರಿ ತೆರೆದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಾದೇಶಿಕ ಭಾಷೆಗಳಲ್ಲಿ ಪ್ರಧಾನಿಯ ಸಂದೇಶ ನೇರವಾಗಿ ತಲುಪುವ ಮೂಲಕ ಜನಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.