ಲಕ್ನೋ, ಅ. 26 (DaijiworldNews/TA): ಉತ್ತರ ಪ್ರದೇಶದ ಲಕ್ನೋ-ಆಗ್ರಾ ಎಕ್ಸ್ಪ್ರೆಸ್ವೇಯಲ್ಲಿ ಇಂದು ಮುಂಜಾನೆ ದೊಡ್ಡ ದುರಂತ ತಪ್ಪಿದಂತಾಗಿದೆ. ದೆಹಲಿಯಿಂದ ಗೊಂಡಾಗೆ ತೆರಳುತ್ತಿದ್ದ ಡಬಲ್ ಡೆಕ್ಕರ್ ಬಸ್ನ ಟೈರ್ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಬಸ್ ಕ್ಷಣಾರ್ಧದಲ್ಲಿ ಜ್ವಾಲಾಮುಖಿಯಂತೆ ಉರಿಯಿತು. ಬೆಂಕಿಯು ಇಡೀ ಬಸ್ನ್ನು ಆವರಿಸುವ ಮುನ್ನವೇ ಚಾಲಕನ ಚಾಕಚಕ್ಯತೆಯಿಂದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಪ್ರಾಣಾಪಾಯದಿಂದ ಎಲ್ಲರೂ ಪಾರಾದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಈ ಘಟನೆ ಬೆಳಗ್ಗೆ ಸುಮಾರು 5 ಗಂಟೆ ಸುಮಾರಿಗೆ, ಆಗ್ರಾ ಎಕ್ಸ್ಪ್ರೆಸ್ವೇ ಟೋಲ್ ಪ್ಲಾಜಾದಿಂದ ಸ್ವಲ್ಪ ಹಿಂದೆ, ಕಾಕೋರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಪ್ರಾಥಮಿಕ ತನಿಖೆಯ ಪ್ರಕಾರ ಟೈರ್ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ.
ಗಮನಾರ್ಹವಾಗಿ, ಕಳೆದ ಎರಡು ದಿನಗಳ ಹಿಂದೆ ಆಂಧ್ರ ಪ್ರದೇಶದಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿದ್ದು, ವೋಲ್ವೊ ಬಸ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 20 ಮಂದಿ ದುರ್ಮರಣ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆ ಕುರಿತಂತೆ ಹೊಸ ಚರ್ಚೆಗಳು ಆರಂಭವಾಗಿವೆ.