ರಾಮನಗರ, ಅ. 26 (DaijiworldNews/AA): ಕುಮಾರಸ್ವಾಮಿ ಅವರನ್ನು ಸಿಎಂ ಕುರ್ಚಿಯಲ್ಲಿ ಕೂರಿಸೋದು ನನ್ನ ಗುರಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ ಇಂದು ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, "ಸ್ಥಳೀಯ ಮುಖಂಡರ ಒತ್ತಡಕ್ಕೆ ಮಣಿದು ನಾನು ಚುನಾವಣೆಗೆ ಬಂದೆ. ನಾನು ಹೇಡಿ ಅಲ್ಲ, ಸಾರ್ವಜನಿಕವಾಗಿ ಕಣ್ಣೀರು ಹಾಕಲ್ಲ, ಆದರೆ ಅವತ್ತು ಕಣ್ಣೀರು ಹಾಕಿದೆ. ಈಗ ಸೊಸೈಟಿ ಚುನಾವಣೆ ಬಗ್ಗೆ ಪ್ರಶ್ನೆ ಮಾಡ್ತಿದ್ದೀರಲ್ಲಾ. ಜಿಲ್ಲೆಯ ಜನ ನನಗೆ ಅಧಿಕಾರ ಕೊಟ್ಟಿದ್ದೀರಾ? ನನಗೆ ಒಂದು ಬಾರಿಯಾದ್ರೂ ಆಶೀರ್ವಾದ ಮಾಡಿದ್ದೀರಾ? ಕುಮಾರಣ್ಣ 1,200 ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದ್ರು. ಆದರೆ ಇಲ್ಲಿ ಅಭಿವೃದ್ಧಿ ರಾಜಕಾರಣಕ್ಕೆ ಬೆಲೆ ಇಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.
"ಜಿಲ್ಲೆಯಲ್ಲಿ ಕಾಂಗ್ರೆಸ್ ನಾಲ್ಕು ಸ್ಥಾನ ಗೆದ್ದಿದೆ, ಇದು ಶಾಶ್ವತ ಅಲ್ಲ. ಜನ ಮನಸ್ಸು ಮಾಡಿದ್ರೆ ಬದಲಾವಣೆ ಆಗೇ ಆಗುತ್ತೆ. ಇಲ್ಲಿ ನಡೆಯುವ ವಿಚಾರ ಇಡೀ ರಾಜ್ಯಕ್ಕೆ ಹೋಗುತ್ತೆ. ಇಲ್ಲಿ ಬೀದಿಬೀದಿಯಲ್ಲಿ ಚರ್ಚೆ ಮಾಡಿದ್ರೆ ಪಕ್ಷದ ಗೌರವ ಏನಾಗುತ್ತೆ? ಏನೇ ಸಮಸ್ಯೆ ಇದ್ರೂ ಪಕ್ಷದ ಚೌಕಟ್ಟಿನ ಒಳಗೆ ಚರ್ಚೆ ಮಾಡಿ. ಅಧಿಕಾರ ಇದ್ದಾಗ ಸಭೆಗೆ ಎಷ್ಟು ಜನ ಸೇರುತ್ತಿದ್ದರು. ಈಗ ಎಷ್ಟು ಜನ ಬಂದಿದ್ದಾರೆ" ಎಂದು ಪ್ರಶ್ನಿಸಿದರು.