ನವದೆಹಲಿ/ಹೈದರಾಬಾದ್, ಅ. 24 (DaijiworldNews/AK):ಆಂಧ್ರದ ಕರ್ನೂಲಿನಲ್ಲಿ ನಡೆದ ಭೀಕರ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಕೇಂದ್ರ ಸರ್ಕಾರ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದೆ.

ಗುರುವಾರ ಮಧ್ಯರಾತ್ರಿ ಹೈದರಾಬಾದ್ನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಬಸ್ ಬೆಂಕಿಗಾಹುತಿಯಾಗಿ 20 ಮಂದಿ ಸಾವನ್ನಪ್ಪಿದ್ದು, 24 ಜನರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಈ ಕುರಿತು ಪಿಎಂ ಕಚೇರಿ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪಿಎಂ ಪರಿಹಾರ ನಿಧಿಯಿಂದ ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ನೀಡುವುದಾಗಿ ತಿಳಿಸಿದೆ.
ಹೈದ್ರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಎಸಿ ಬಸ್ ಆಂಧ್ರದ ಕರ್ನೂಲ್ ಬಳಿ ಬೈಕ್ವೊಂದಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತವಾದ ಬಳಿಕವೂ ಡ್ರೈವರ್ ಬಸ್ ನಿಲ್ಲಿಸದೇ ಸವಾರನ ಸಮೇತ ಬೈಕ್ ಅನ್ನು ಸುಮಾರು 300 ಮೀಟರ್ ಎಳೆದೊಯ್ದಿದ್ದಾನೆ. ಈ ವೇಳೆ, ಬೈಕ್ನಲ್ಲಿದ್ದ ಪೆಟ್ರೋಲ್ ಚೆಲ್ಲಿ ಬಸ್ ಅಡಿ ಬೆಂಕಿ ಹೊತ್ತಿಕೊಂಡಿದೆ. ನಂತರ ಇಡೀ ಬಸ್ಗೆ ಬೆಂಕಿ ಹಬ್ಬಿದೆ. ಎಸಿ ಬಸ್ ಆಗಿದ್ದ ಕಾರಣ ಕ್ಷಣಾರ್ಧದಲ್ಲಿ ಇಡೀ ಬಸ್ಗೆ ಬೆಂಕಿ ಆವರಿಸಿದೆ.
ಮುಂಜಾನೆ 3 ಗಂಟೆ ಸುಮಾರಿನಲ್ಲಿ ದುರಂತ ಸಂಭವಿಸಿದ್ದು, ಪ್ರಯಾಣಿಕರು ನಿದ್ದೆಯಲ್ಲಿದ್ದರು. ಹೀಗಾಗಿ, 20 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.